"ಅವರು ನನ್ನನ್ನು ಕಾಡಿನೊಳಗೆ ಎಳೆದೊಯ್ದರು....": ಭಯಾನಕತೆಯನ್ನು ನೆನಪಿಸಿಕೊಂಡ ದುರ್ಗಾಪುರ ಅತ್ಯಾಚಾರ ಪ್ರಕರಣ ಸಂತ್ರಸ್ತೆ
Photo Credit : PTI
ಕೋಲ್ಕತಾ: ಒಡಿಶಾದ ಜಲೇಶ್ವರದ ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಪಶ್ಚಿಮ ಬಂಗಾಳದ ದುರ್ಗಾಪುರದ ತನ್ನ ಖಾಸಗಿ ಕಾಲೇಜಿನ ಸಮೀಪ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದ ರಾತ್ರಿಯ ಆತಂಕಕಾರಿ ಕ್ಷಣಗಳನ್ನು ತನಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಳಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ರಾತ್ರಿ ತಾನು ಸ್ನೇಹಿತನೊಂದಿಗೆ ಊಟ ಮುಗಿಸಿ ಮರಳುತ್ತಿರುವಾಗ ದುಷ್ಕರ್ಮಿಗಳ ಗುಂಪೊಂದು ಹೇಗೆ ತಮ್ಮ ಮೇಲೆ ದಾಳಿ ನಡೆಸಿತ್ತು ಎನ್ನುವುದನ್ನು 23ರ ಹರೆಯದ ಸಂತ್ರಸ್ತೆ ಬಹಿರಂಗಗೊಳಿಸಿದ್ದಾರೆ.
‘ಅವರು ತಮ್ಮ ವಾಹನವನ್ನು ಬಿಟ್ಟು ನಮ್ಮತ್ತ ಬರುತ್ತಿರುವುದನ್ನು ನಾವು ಗಮನಿಸಿದ್ದೆವು ಮತ್ತು ಕಾಡಿನತ್ತ ಓಡಲು ಆರಂಭಿಸಿದ್ದೆವು. ಆ ಮೂವರೂ ನಮ್ಮ ಹಿಂದೆ ಓಡಿ ಬಂದಿದ್ದರು, ನನ್ನನ್ನು ಹಿಡಿದು ಕಾಡಿನೊಳಗೆ ಎಳೆದೊಯ್ದಿದ್ದರು’ ಎಂದು ಸಂತ್ರಸ್ತೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಅವರು ನನ್ನ ಫೋನ್‌ನ್ನು ಕಿತ್ತುಕೊಂಡಿದ್ದರು ಮತ್ತು ನನ್ನ ಸ್ನೇಹಿತನಿಗೆ ಕರೆ ಮಾಡುವಂತೆ ಬಲವಂತಗೊಳಿಸಿದ್ದರು. ಆತ ಬರದಿದ್ದಾಗ ನನ್ನನ್ನು ಮಲಗಲು ಒತ್ತಾಯಿಸಿದ್ದರು. ನಾನು ಕೂಗಿಕೊಂಡಾಗ ದುಷ್ಕರ್ಮಿಗಳು ನಾನು ಗದ್ದಲ ಮಾಡಿದರೆ ತಾವು ಇನ್ನೂ ಹಲವರನ್ನು ಕರೆಯುತ್ತೇವೆ ಮತ್ತು ಅವರೂ ಇದನ್ನೇ ಮಾಡುತ್ತಾರೆ ಎಂದು ಬೆದರಿಕೆಯೊಡ್ಡಿದ್ದರು’ ಎಂದು ಸಂತ್ರಸ್ತೆ ವೈದ್ಯರಿಗೆ ತಿಳಿಸಿದ್ದಾಳೆ.
ಪಶ್ಚಿಮ ಬಂಗಾಳ ಪೋಲಿಸರ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಮೆಡಿಕಲ್ ಕಾಲೇಜಿನ ಮಾಜಿ ಸೆಕ್ಯೂರಿಟಿ ಗಾರ್ಡ್,ಆಸ್ಪತ್ರೆಯ ನೌಕರ,ನಗರಸಭೆಯ ಉದ್ಯೋಗಿ ಮತ್ತು ಓರ್ವ ನಿರುದ್ಯೋಗಿ ಯುವಕ ಬಂಧಿತರಲ್ಲಿ ಸೇರಿದ್ದಾರೆ.
ಸಂತ್ರಸ್ತೆಯ ಹೇಳಿಕೆಯನ್ನು ಮತ್ತು ಘಟನೆಗಳ ಅನುಕ್ರಮಣಿಕೆಯನ್ನು ಪರಿಶೀಲಿಸಲು ಸನ್ನಿವೇಶದ ಪುನರ್‌ಸೃಷ್ಟಿಗಾಗಿ ಎಲ್ಲ ಶಂಕಿತ ಆರೋಪಿಗಳನ್ನು ಕಾಲೇಜಿಗೆ ಸಮೀಪದ ಘಟನಾ ಸ್ಥಳಕ್ಕೆ ಕರೆದೊಯ್ಯಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ವಿಧಿವಿಜ್ಞಾನ ಮತ್ತು ಡಿಜಿಟಲ್ ಪುರಾವೆಗಳ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ ಎಂದು ಹಿರಿಯ ಅಧಿಕಾರಿಯೋರ್ವರು ದೃಢಪಡಿಸಿದರು.
ಈ ಘಟನೆಯು ದೇಶಾದ್ಯಂತ ಆಕ್ರೋಶವನ್ನು ಸೃಷ್ಟಿಸಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಪ.ಬಂಗಾಳ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿರುವ ಸಂತ್ರಸ್ತೆಯ ತಂದೆ, ‘ಅವರು(ಮುಖ್ಯಮಂತ್ರಿ) ಕೂಡ ಮಹಿಳೆಯೇ ಆಗಿದ್ದಾರೆ. ಇಂತಹ ಬೇಜವಾಬ್ದಾರಿಯ ಹೇಳಿಕೆಯನ್ನು ನೀಡಲು ಅವರಿಗೆ ಹೇಗೆ ಸಾಧ್ಯ? ಮಹಿಳೆಯರು ತಮ್ಮ ಉದ್ಯೋಗಗಳನ್ನು ತೊರೆದು ಮನೆಯಲ್ಲಿ ಕುಳಿತುಕೊಳ್ಳಬೇಕೇ? ಬಂಗಾಳ ಔರಂಗಜೇಬ್‌ನ ಆಳ್ವಿಕೆ ಇರುವಂತಿದೆ. ನಾನು ನನ್ನ ಮಗಳನ್ನು ಒಡಿಶಾಕ್ಕೆ ವಾಪಸ್ ಕರೆದೊಯ್ಯಲು ಬಯಸಿದ್ದೇನೆ. ನಮಗೆ ಅವಳ ಜೀವ ಮುಖ್ಯ, ವೃತ್ತಿಜೀವನ ನಂತರದ್ದು’ ಎಂದು ಹೇಳಿದರು.
ವಿದ್ಯಾರ್ಥಿನಿಯರು ತಡರಾತ್ರಿಯಲ್ಲಿ ಮನೆಗಳಿಂದ ಹೊರ ಬರಬಾರದು ಎಂಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಸಂತ್ರಸ್ತೆಯ ತಂದೆಯ ಆಕ್ರೋಶ ಹೊರಬಿದ್ದಿದೆ. ಮಮತಾರ ಹೇಳಿಕೆಗೆ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.