FEMA ಉಲ್ಲಂಘನೆ ಆರೋಪ| ನ್ಯೂಸ್‌ಕ್ಲಿಕ್ ಪೋರ್ಟಲ್, ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥರಿಗೆ 184 ಕೋಟಿ ರೂ.ದಂಡ ವಿಧಿಸಿದ ಈಡಿ
Photo Credit: The Hindu
ಹೊಸದಿಲ್ಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(FEMA) ಉಲ್ಲಂಘನೆ ಆರೋಪದಲ್ಲಿ ನ್ಯೂಸ್‌ಕ್ಲಿಕ್ ನ್ಯೂಸ್ ಪೋರ್ಟಲ್ ಮತ್ತು ಅದರ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರಿಗೆ ಜಾರಿ ನಿರ್ದೇಶನಾಲಯ 184 ಕೋಟಿ ರೂ. ದಂಡ ವಿಧಿಸಿದೆ.
184 ಕೋಟಿಯಲ್ಲಿ 120 ಕೋಟಿ ದಂಡವು ನ್ಯೂಸ್‌ಕ್ಲಿಕ್ ಮೇಲೆ ವಿಧಿಸಿದರೆ, ಪ್ರಬೀರ್ ಪುರಕಾಯಸ್ಥ ಅವರ ಮೇಲೆ 64 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಈಡಿ ಮೂಲಗಳು ತಿಳಿಸಿದೆ.
ರಾಷ್ಟ್ರ ವಿರೋಧಿ ಚಟುವಟಿಕೆ, ಅಕ್ರಮ ಹಣ ವರ್ಗಾವಣೆ, ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಸೇರಿದಂತೆ ವಿವಿಧ ಆರೋಪಗಳಡಿ ನ್ಯೂಸ್‌ಕ್ಲಿಕ್ ಮತ್ತು ಅದರ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ವಿರುದ್ಧ ಜಾರಿ ನಿರ್ದೇಶನಾಲಯ, ಸಿಬಿಐ, ದಿಲ್ಲಿ ಪೊಲೀಸ್ ಮತ್ತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ.
ದಿಲ್ಲಿ ಪೊಲೀಸರು 2023ರ ಅಕ್ಟೋಬರ್‌ನಲ್ಲಿ ಪ್ರಬೀರ್ ಪುರ್ಕಾಯಸ್ಥ ಅವರನ್ನು ಬಂಧಿಸಿದ್ದರು. ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ನ್ಯೂಸ್‌ಕ್ಲಿಕ್ ಪೋರ್ಟಲ್ ಮತ್ತು ಅದರ ಮಾಲಕರು ಅಕ್ರಮ ಎಸಗಿದ್ದಾರೆ ಎಂದು ಬಿಜೆಪಿಯು ಆರೋಪಿಸಿತ್ತು. ‘ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ, ಈ ಪೋರ್ಟಲ್ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಹಣಕಾಸಿನ ನೆರವು ಪಡೆದಿದೆ. ಸಿಂಘಮ್ ಚೀನಾ ಸರಕಾರದ ಮಾಧ್ಯಮ ಪ್ರಚಾರದ ವಿಭಾಗದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.