×
Ad

ಉತ್ತರಾಖಂಡ: ದೇವಸ್ಥಾನದ ಬಳಿಯ ಖಾಲಿ ಜಾಗದಲ್ಲಿ ನಮಾಝ್ ಮಾಡಿದ ವ್ಯಕ್ತಿಗೆ ಹಲ್ಲೆ; ಬಲವಂತದಿಂದ ಧಾರ್ಮಿಕ ಘೋಷಣೆ ಕೂಗಿಸಿದ ಗುಂಪು

Update: 2026-02-25 16:56 IST

Screengrab : X

ಡೆಹ್ರಾಡೂನ್: ದೇವಸ್ಥಾನವೊಂದರ ಮುಂದಿನ ಖಾಲಿ ಜಾಗದಲ್ಲಿ ನಮಾಝ್ ಮಾಡಿದ್ದಕ್ಕಾಗಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಗುಂಪು, ಅವರಿಂದ ಬಲವಂತದಿಂದ ಧಾರ್ಮಿಕ ಘೋಷಣೆಗಳನ್ನು ಕೂಗಿಸಿದ ಘಟನೆ ಉತ್ತರಾಖಂಡದ ರುದ್ರಪುರದಲ್ಲಿ ನಡೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು,ಆರೋಪಿಗಳು ಬಡಿಗೆಗಳಿಂದ ವ್ಯಕ್ತಿಯನ್ನು ಥಳಿಸುತ್ತಿರುವುದು ಮತ್ತು ನಿಂದಿಸುತ್ತಿರುವುದು ಅದರಲ್ಲಿ ಕಂಡು ಬಂದಿದೆ.

ಸಂತ್ರಸ್ತ ವ್ಯಕ್ತಿ ಶಾಹಿದ್ ರೇಶಮ್ ಬಾರಿ ಪ್ರದೇಶದ ನಿವಾಸಿಯಾಗಿದ್ದು,ಜಗತ್‌ಪುರದಲ್ಲಿಯ ಅತ್ರಿಯ ದೇವಸ್ಥಾನದ ಮುಂದೆ ರಮಝಾನ್ ನಮಾಜ್ ಮಾಡುತ್ತಿದ್ದಾಗ ಹಿಂಸಾತ್ಮಕ ಗುಂಪು ಅವರನ್ನು ಹಿಡಿದು ದೌರ್ಜನ್ಯ ಮೆರೆದಿದೆ ಎಂದು ಪೋಲೀಸರು ತಿಳಿಸಿದರು.

ಘಟನೆಯ ಮಾಹಿತಿ ತಿಳಿದ ಮುಸ್ಲಿಂ ಸಮುದಾಯದ ಮುಖಂಡರು ಶಾಹಿದ್‌ರನ್ನು ಪೋಲಿಸ್ ಠಾಣೆಗೆ ಕರೆದೊಯ್ದು ದೂರು ಕೊಡಿಸಿದ್ದಾರೆ.

ತಾನು ಹಲವಾರು ದಿನಗಳಿಂದ ದೇವಸ್ಥಾನದ ಸಮೀಪ ಕೆಲಸ ಮಾಡುತ್ತಿದ್ದು, ತಾನು ನಮಾಝ್ ಮಾಡುತ್ತಿದ್ದ ಸ್ಥಳವು ದೇವಸ್ಥಾನದಿಂದ ಸಾಕಷ್ಟು ದೂರದಲ್ಲಿತ್ತು ಎಂದು ಶಾಹಿದ್ ಹೇಳಿದ್ದಾರೆ.

ಆರೋಪಿಗಳಲ್ಲಿ ಓರ್ವ ಕೊಲೆ ಅಪರಾಧಿಯಾಗಿದ್ದು ಪ್ರಸ್ತುತ ಪೆರೋಲ್‌ನಲ್ಲಿ ಹೊರಗಿದ್ದಾನೆ ಎಂದು ದೂರುದಾರರು ತಿಳಿಸಿದ್ದಾರೆ.

ತನ್ನ ವಿರುದ್ಧ ಪ್ರಕರಣ ದಾಖಲಾದರೂ ಸರಿ,ದೇವಸ್ಥಾನದ ಜಾಗದಲ್ಲಿ ಇತರ ಯಾವುದೇ ಧರ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ದೇವಸ್ಥಾನದ ಮ್ಯಾನೇಜರ್ ಅರವಿಂದ್ ಶರ್ಮಾ ಹೇಳಿದರು.

ಸ್ಥಳಕ್ಕೆ ಧಾವಿಸಿದ ಪೋಲಿಸರು ಶಾಂತಿ ಕಾಯ್ದುಕೊಳ್ಳುವಂತೆ ಉಭಯ ಸಮುದಾಯಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ದೂರಿನ ಆಧಾರದಲ್ಲಿ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಪೋಲಿಸರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News