×
Ad

ಕಾನೂನಿನ ಉಲ್ಲಂಘನೆಯನ್ನು ಸಹಿಸುವುದಿಲ್ಲ: ಭಾರತೀಯ ವಿದ್ಯಾರ್ಥಿಗೆ ಕೈಕೋಳ ವಿವಾದದ ನಡುವೆ ಅಮೆರಿಕ ರಾಯಭಾರಿ ಕಚೇರಿ ಪ್ರತಿಕ್ರಿಯೆ

Update: 2025-06-10 18:03 IST

Photo | NDTV

ಹೊಸದಿಲ್ಲಿ: ಅಮೆರಿಕದ ನೆವಾರ್ಕ್ ವಿಮಾನ ನಿಲ್ದಾಣದಿಂದ ಭಾರತೀಯ ವಿದ್ಯಾರ್ಥಿಗೆ ಕೈಕೋಳ ತೊಡಿಸಿ ಗಡೀಪಾರು ಮಾಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು,‘ನಮ್ಮ ದೇಶವು ಕಾನೂನುಬದ್ಧ ಪ್ರಯಾಣಿಕರನ್ನು ಸ್ವಾಗತಿಸುವುದನ್ನು ಮುಂದುವರಿಸಿದ್ದರೂ, ಅದು ಅಕ್ರಮ ಪ್ರವೇಶ, ವೀಸಾಗಳ ದುರುಪಯೋಗ ಅಥವಾ ಅಮೆರಿಕದ ಕಾನೂನಿನ ಉಲ್ಲಂಘನೆಯನ್ನು ಸಹಿಸುವುದಿಲ್ಲ. ಅಮೆರಿಕಕ್ಕೆ ಭೇಟಿ ನೀಡುವುದು ಹಕ್ಕು ಅಲ್ಲ ’ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದೆ.

ಅನಿವಾಸಿ ಭಾರತೀಯ ಕುನಾಲ್ ಜೈನ್ ಎಕ್ಸ್‌ನಲ್ಲಿ ವಿದ್ಯಾರ್ಥಿಗೆ ಕೈಕೋಳ ತೊಡಿಸಿದ ಘಟನೆಯ ವೀಡಿಯೊವನ್ನು ಹಂಚಿಕೊಂಡು ಅಧಿಕಾರಿಗಳು ವಿದ್ಯಾರ್ಥಿಯನ್ನು ಅಪರಾಧಿಯಂತೆ ನಡೆಸಿಕೊಂಡಿದ್ದರು ಎಂದು ನೋವು ವ್ಯಕ್ತಪಡಿಸಿದ ಬಳಿಕ ವಿವಾದ ಭುಗಿಲೆದ್ದಿದೆ.

‘ನಿನ್ನೆ ರಾತ್ರಿ ನೆವಾರ್ಕ್ ವಿಮಾನ ನಿಲ್ದಾಣದಿಂದ ಯುವ ಭಾರತೀಯ ವಿದ್ಯಾರ್ಥಿಯನ್ನು ಗಡಿಪಾರು ಮಾಡುತ್ತಿರುವುದನ್ನು ನೋಡಿದೆ, ಆತ ಅಳುತ್ತಿದ್ದ, ಕೈಕೋಳವನ್ನು ತೊಡಿಸಲಾಗಿತ್ತು, ಅಪರಾಧಿಯಂತೆ ನಡೆಸಿಕೊಳ್ಳಲಾಗಿತ್ತು. ಆತ ಕನಸುಗಳನ್ನು ಬೆನ್ನಟ್ಟಿ ಬಂದಿದ್ದ, ಯಾವುದೇ ಹಾನಿಯನ್ನು ಮಾಡಲು ಅಲ್ಲ. ಓರ್ವ ಅನಿವಾಸಿ ಭಾರತೀಯನಾಗಿ ನಾನು ಅಸಹಾಯಕನಾಗಿದ್ದೆ, ನನ್ನ ಹೃದಯ ಒಡೆದಿತ್ತು. ಇದೊಂದು ಮಾನವ ದುರಂತ ’ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದರು.

ಜೈನ್ ಅವರ ಪ್ರಕಾರ, ವಿದ್ಯಾರ್ಥಿಯು ಹರ್ಯಾನ್ವಿ ಭಾಷೆಯಲ್ಲಿ ಮಾತನಾಡುತ್ತಿದ್ದ, ತಾನು ಹುಚ್ಚನಲ್ಲ ಎಂದು ಅಲವತ್ತುಕೊಳ್ಳುತ್ತಿದ್ದ. ಆದರೆ ಅಧಿಕಾರಿಗಳು ಆತ ಹುಚ್ಚನಂತೆ ಕಾಣುವಂತೆ ಮಾಡಲು ಪ್ರಯತ್ನಿಸುತ್ತಿದ್ದರು. ಈ ಮಕ್ಕಳು ವೀಸಾ ಪಡೆದುಕೊಂಡು ಬೆಳಿಗ್ಗೆ ವಿಮಾನದಲ್ಲಿ ಬರುತ್ತಾರೆ. ಯಾವುದೋ ಕಾರಣದಿಂದಾಗಿ ವಲಸೆ ಅಧಿಕಾರಿಗಳಿಗೆ ತಮ್ಮ ಅಮೆರಿಕ ಭೇಟಿಯ ಕಾರಣವನ್ನು ವಿವರಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಮತ್ತು ಅವರನ್ನು ಅಪರಾಧಿಗಳಂತೆ ಕಟ್ಟಿ ಹಾಕಿ ಸಂಜೆಯ ವಿಮಾನದಲ್ಲಿ ವಾಪಸ್ ಕಳುಹಿಸಲಾಗುತ್ತದೆ. ಪ್ರತಿ ದಿನ ಇಂತಹ 3-4 ಘಟನೆಗಳು ನಡೆಯುತ್ತವೆ. ಕಳೆದ ಕೆಲವು ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ ಎಂದು ಜೈನ್ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಘಟನೆಯ ಬಳಿಕ ನ್ಯೂಯಾರ್ಕ್‌ನಲ್ಲಿ ಭಾರತೀಯ ಕಾನ್ಸುಲೇಟ್ ಜನರಲ್ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಅದನ್ನು ಗಮನಿಸಿದ್ದರು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಭರವಸೆ ನೀಡಿದ್ದರು.

ಅಮೆರಿಕ ಸರಕಾರವು ಪೂರ್ವ ಸೂಚನೆಯಿಲ್ಲದೆ ವೀಸಾಗಳನ್ನು ರದ್ದುಗೊಳಿಸುವ ಮೂಲಕ ವಿದೇಶಿ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ನಡುವೆ ಈ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News