ದೇಶದ ಪ್ರತಿಯೋರ್ವ ದಲಿತನೂ ‘ಅಂಬೇಡ್ಕರ್’ ಇದ್ದಂತೆ : ರಾಹುಲ್ ಗಾಂಧಿ
Photo | PTI
ಲಕ್ನೋ: ಸಂವಿಧಾನವನ್ನು ಬದಲಾಯಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೇಶದ ಪ್ರತಿಯೋರ್ವ ದಲಿತನೂ ‘ಅಂಬೇಡ್ಕರ್’ ಇದ್ದಂತೆ ಹೇಳಿದ್ದಾರೆ.
ರಾಯ್‌ಬರೇಲಿಯಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸಾವಿರಾರು ವರ್ಷಗಳಿಂದ ದಲಿತರು ತಾರತಮ್ಯ ಎದುರಿಸುತ್ತಿದ್ದಾರೆ. ಅಂಬೇಡ್ಕರ್ ಅವರು ನಮ್ಮ ಸಂವಿಧಾನವನ್ನು ಸಿದ್ಧಪಡಿಸುವಾಗ ತಾರತಮ್ಯವನ್ನು ಗಮನದಲ್ಲಿಟ್ಟುಕೊಂಡಿದ್ದರು. ಅವರು ಸಂವಿಧಾನದ ಮೂಲಕ ದಲಿತರಿಗೆ ಅಧಿಕಾರ ನೀಡಿದರು ಎಂದು ಹೇಳಿದ್ದಾರೆ.
‘ದೇಶದಲ್ಲಿರುವ ಪ್ರತಿಯೋರ್ವ ದಲಿತನೂ ಅಂಬೇಡ್ಕರ್’ ಇದ್ದಂತೆ, ಸಂವಿಧಾನವು ದೇಶದ ಮಹಾನ್ ವ್ಯಕ್ತಿಗಳ ಚಿಂತನೆ ಮತ್ತು ವಿಚಾರಗಳನ್ನು ಒಳಗೊಂಡಿದೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ನಮ್ಮ ಸಂಸ್ಕೃತಿಯನ್ನೂ ಒಳಗೊಂಡಿದೆ. ಇಂದು ಸಂವಿಧಾನದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ದಲಿತರು 15% ಜನಸಂಖ್ಯೆ ಹೊಂದಿದ್ದಾರೆ. ಆದರೆ ದೇಶದ ಉನ್ನತ ಕಂಪೆನಿಗಳ ಸಿಇಒ ಮತ್ತು ಮಾಲಕರು ದಲಿತ ಸಮುದಾಯಕ್ಕೆ ಸೇರಿದವರಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸಂವಿಧಾನವನ್ನು ಬದಲಾಯಿಸಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಅದನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಅಂಬೇಡ್ಕರ್ ಅವರು ದಲಿತರು ಶಿಕ್ಷಿತರಾಗಬೇಕು ಮತ್ತು ಸಂಘಟಿತರಾಗಬೇಕು ಎಂದು ಬಯಸಿದ್ದರು ಎಂದು ರಾಹುಲ್ ಗಾಂಧಿ ಹೇಳಿದರು.