×
Ad

ದಿಲ್ಲಿಯ ಕೆಂಪುಕೋಟೆ ಬಳಿ ಸ್ಫೋಟ; 12 ಮಂದಿ ಮೃತ್ಯು, ಕಾರಿನ ಮಾಲಕ ವಶಕ್ಕೆ

ಎನ್‌ಐಎ, ಎನ್‌ಎಸ್‌ಜಿ ತನಿಖೆಗೆ ಚಾಲನೆ; ದೇಶದಾದ್ಯಂತ ಹೈ ಅಲರ್ಟ್

Update: 2025-11-11 08:28 IST
PC | PTI

ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರು ಸ್ಫೋಟದಲ್ಲಿ 12 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಹುಂಡೈ ಐ20 ಮಾದರಿಯ ಕಾರಿನಲ್ಲಿ ಸಂಭವಿಸಿದ ಈ ಸ್ಫೋಟಕ್ಕೆ ಸಂಬಂಧಿಸಿದಂತೆ ವಾಹನದ ಮಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಫೋಟದ ಸ್ವರೂಪ ಹಾಗೂ ಹಿನ್ನೆಲೆಯನ್ನು ತಿಳಿಯಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ತಂಡಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಥಳಕ್ಕೆ ಕಳುಹಿಸಲು ನಿರ್ದೇಶಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸಂಜೆ ಸುಮಾರು 6.52ರ ಸುಮಾರಿಗೆ ಕೆಂಪುಕೋಟೆ ಟ್ರಾಫಿಕ್ ಸಿಗ್ನಲ್ ಬಳಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ದಿಲ್ಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ತಿಳಿಸಿದ್ದಾರೆ.

ಕಾರಿನೊಳಗೆ ಮೂವರು ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಇದು ಆತ್ಮಹತ್ಯಾ ಬಾಂಬ್ ದಾಳಿ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

“ಗಾಯಾಳುಗಳ ದೇಹದಲ್ಲಿ ಯಾವುದೇ ಲೋಹದ ತುಣುಕುಗಳು ಅಥವಾ ಪೆಲೆಟ್‌ಗಳು ಕಂಡುಬಂದಿಲ್ಲ. ಎಲ್ಲಾ ಕೋನಗಳಿಂದ ವಿಚಾರಣೆ ನಡೆಯುತ್ತಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸ್ಫೋಟದಲ್ಲಿ ಒಟ್ಟು 12 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯ ಹೊರಗೆ ಬಂಧು–ಬಳಗದವರು ಪ್ರೀತಿಪಾತ್ರರ ಕುರಿತು ಮಾಹಿತಿ ಪಡೆಯಲು ಆತಂಕದಿಂದ ಕಾಯುತ್ತಿದ್ದ ದೃಶ್ಯ ಕಂಡು ಬಂದಿತು. ಆಟೋ ಚಾಲಕ ಸಮೀರ್ ಖಾನ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಬಂಧುಗಳು ತಿಳಿಸಿದ್ದಾರೆ.

ಸ್ಫೋಟದಲ್ಲಿ ಬಳಸಲಾದ ಹುಂಡೈ i20 ಕಾರಿನ ಮೂಲ ಮಾಲಕನನ್ನು ದಿಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು Hindustan Times ವರದಿ ಮಾಡಿದೆ.

ಸ್ಫೋಟದಲ್ಲಿ ಭಾಗಿಯಾಗಿದ್ದ ಕಾರು HR 26 CE 7674 ನಂಬರಿನ i20 ಮಾದರಿಯದ್ದಾಗಿದ್ದು, ಅದನ್ನು ಮುಹಮ್ಮದ್ ಸಲ್ಮಾನ್ ಎಂಬವರು ಒಂದೂವರೆ ವರ್ಷಗಳ ಹಿಂದೆ ಓಖ್ಲಾದ ದೇವೇಂದರ್ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನೂ ಈಗ ವಶಕ್ಕೆ ಪಡೆಯಲಾಗಿದೆ ಎಂದು Hindustan Times ವರದಿ ಮಾಡಿದೆ.

ನಂತರ ದೇವೇಂದರ್ ಆ ವಾಹನವನ್ನು ಅಂಬಾಲಾದಲ್ಲಿ ಮತ್ತೊಬ್ಬರಿಗೆ ಮಾರಾಟ ಮಾಡಿದ್ದು, ಬಳಿಕ ಅದು ಪುಲ್ವಾಮಾದ ಇನ್ನೊಬ್ಬ ವ್ಯಕ್ತಿಯ ಕೈಗೆ ಹೋಗಿರುವುದಾಗಿ ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ವಾಹನದ ನೋಂದಣಿ ಹೊಸ ಖರೀದಿದಾರರ ಹೆಸರಿಗೆ ವರ್ಗಾವಣೆ ಆಗದೆ ಇರುವುದರಿಂದ ತನಿಖೆಗೆ ಅಡಚಣೆ ಉಂಟಾಗಿದೆ. ಕಾರಿನ ವಹಿವಾಟಿನಲ್ಲಿ ಭಾಗಿಯಾದ ಎಲ್ಲರನ್ನೂ ಗುರುತಿಸಲು ಹಾಗೂ ಅದು ಕೊನೆಗೆ ಸ್ಫೋಟ ಸ್ಥಳಕ್ಕೆ ಹೇಗೆ ತಲುಪಿತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ವಾಹನ ಮಾರಾಟದ ಸರಪಳಿಯಲ್ಲಿ ಸಂಶಯಾಸ್ಪದ ಅಂಶಗಳು ಕಂಡುಬಂದಿದ್ದು, ಎನ್‌ಐಎ ತನಿಖೆ ಮಾಡುತ್ತಿದೆ.

ಸ್ಫೋಟದ ನಂತರ ದಿಲ್ಲಿ ಸಹಿತ ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್‌ನಲ್ಲೂ ರೆಡ್ ಅಲರ್ಟ್ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

“ಕಿವುಡಗೊಳಿಸುವಷ್ಟು ಪ್ರಬಲ ಶಬ್ದ ಕೇಳಿಸಿತು. ಕಟ್ಟಡ ನಡುಗಿದಂತಾಯಿತು. ಜನರು ಚಾಂದಿನಿ ಚೌಕ್‌ನಲ್ಲಿ ಭಯಭೀತರಾಗಿ ಓಡಾಡಿದರು. ಒಮ್ಮೆಲೇ ಗೊಂದಲ ಸೃಷ್ಟವಾಯಿತು,” ಎಂದು ಮಾರುಕಟ್ಟೆ ಸಂಘದ ಅಧ್ಯಕ್ಷ ಸಂಜಯ್ ಭಾರ್ಗವ್ ಹೇಳಿದ್ದಾರೆ.

ಸುಮಾರು 2 ಕಿಮೀ ದೂರದವರೆಗೂ ಸ್ಫೋಟದ ಶಬ್ದ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಘಟನೆಯನ್ನು “ಅತ್ಯಂತ ದುಃಖಕರ ಮತ್ತು ಆತಂಕಕಾರಿ” ಎಂದು ಕರೆದಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಅನೇಕ ನಾಯಕರೂ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ದಿಲ್ಲಿಯ ಅತ್ಯಂತ ಭದ್ರತಾ ವಲಯದೊಳಗೆ ನಡೆದ ಈ ಸ್ಫೋಟ ರಾಷ್ಟ್ರದ ಭದ್ರತೆಯ ಮೇಲೆ ಗಂಭೀರ ಪ್ರಶ್ನೆ ಎತ್ತಿದೆ. ಸ್ಫೋಟದ ನಿಖರ ಕಾರಣ ಹಾಗೂ ಭಯೋತ್ಪಾದಕ ಕೃತ್ಯವೇ ಎಂಬುದರ ಕುರಿತು ಎನ್‌ಐಎ, ಎನ್‌ಎಸ್‌ಜಿ ತಂಡಗಳು ತನಿಖೆ ಆರಂಭಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News