×
Ad

ಫರಿದಾಬಾದ್‌ | ವರದಕ್ಷಿಣೆಗಾಗಿ ಕೊಲೆ ಪ್ರಕರಣಕ್ಕೆ ತಿರುವು : ಹತ್ಯೆಗೆ ಮೊದಲು ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದ ಮಾವ!

Update: 2025-06-27 17:38 IST

ಹರ್ಯಾಣ : ಫರಿದಾಬಾದ್‌ನಲ್ಲಿ ವರದಕ್ಷಿಣೆಗಾಗಿ ನಡೆದ ತನು ಎಂಬ ಯುವತಿಯ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಆಕೆಯ ಮಾವ ಕೊಲೆಯ ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ತನು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಾವ ಭೂಪ್ ಸಿಂಗ್ ಮತ್ತು ಅತ್ತೆ ಸೋನಿಯಾಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಕೊಲೆ ಪೂರ್ವ ಯೋಜಿತ ಕೃತ್ಯ ಎಂದು ಭೂಪ್ ಸಿಂಗ್ ಬಹಿರಂಗಪಡಿಸಿದ್ದಾನೆ. ಪೊಲೀಸರು ಪತಿ ಅರುಣ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ತನು ಕೊಲೆ ಪೂರ್ವ ಯೋಜಿತ ಕೃತ್ಯ!

ಎಪ್ರಿಲ್ 21ರ ರಾತ್ರಿ ಸೋಸೆ ತನು ಅವರನ್ನು ಹತ್ಯೆ ಮಾಡಬೇಕೆಂದು ಮಾವ ಭೂಪ್ ಸಿಂಗ್, ಪತಿ ಅರುಣ್ ಮತ್ತು ಅತ್ತೆ ಸೋನಿಯಾ ಯೋಜನೆ ರೂಪಿಸಿದ್ದರು. ಅದರಂತೆ ಎಪ್ರಿಲ್ 21ರ ರಾತ್ರಿ ಅರುಣ್ ಪತ್ನಿಗೆ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿಕೊಟ್ಟಿದ್ದ. ಬಳಿಕ ಅರುಣ್ ನೆಲ ಮಹಡಿಯಲ್ಲಿರುವ ಕೋಣೆಯಲ್ಲಿ ಮಲಗಿದ್ದ.

ಯೋಜನೆಯಂತೆ ಭೂಪ್ ಸಿಂಗ್ ತಡರಾತ್ರಿ ತನು ಮಲಗಿದ್ದ ಕೋಣೆಗೆ ಪ್ರವೇಶಿಸಿ ದುಪಟ್ಟಾದಿಂದ ಆಕೆಯ ಕತ್ತು ಹಿಸುಕಲು ಮುಂದಾಗಿದ್ದ. ಆಕೆಗೆ ಮೊದಲೇ ಅರುಣ್ ನಿದ್ರೆ ಮಾತ್ರೆಯನ್ನು ಹಾಕಿ ಕೊಟ್ಟಿದ್ದರಿಂದ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಭೂಪ್ ಸಿಂಗ್ ತನ್ನ ಸೊಸೆಯನ್ನು ಕೊಲೆ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ, ಆತ ಅತ್ಯಾಚಾರದ ಬಗ್ಗೆ ತನ್ನ ಮಗ ಮತ್ತು ಪತ್ನಿಗೆ ತಿಳಿಸಿರಲಿಲ್ಲ. ಅತ್ಯಾಚಾರ ಕೊಲೆ ಬಳಿಕ ಅರುಣ್ ಜೊತೆ ಸೇರಿ ರಸ್ತೆಯಲ್ಲಿ ಮೊದಲೇ ಅಗೆದಿದ್ದ ಗುಂಡಿಯಲ್ಲಿ ಮೃತದೇಹವನ್ನು ಹೂತು ಹಾಕಿದ್ದ.

ಇದೀಗ ನಯಬ್ ತಹಶೀಲ್ದಾರ್ ಜಸ್ವಂತ್ ಸಿಂಗ್ ಅವರ ನೇತೃತ್ವದಲ್ಲಿ ಹೊಂಡವನ್ನು ಅಗೆದು ತನುವಿನ ಮೃತದೇಹ ಹೊರತೆಗೆಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಭೂಪ್ ಸಿಂಗ್, ಪತ್ನಿ ಸೋನಿಯಾ ಮಗ ಅರುಣ್ ಸಿಂಗ್ ಮತ್ತು ಮಗಳು ಕಾಜಲ್ ವಿರುದ್ಧ ಪಲ್ಲಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಘಟನೆಯ ಹಿನ್ನೆಲೆ :

ಹರ್ಯಾಣದ ಫರಿದಾಬಾದ್‌ನ ವಸತಿ ಪ್ರದೇಶದ ಬೀದಿಯೊಂದರಲ್ಲಿ 10 ಅಡಿ ಆಳದ ಗುಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಉತ್ತರ ಪ್ರದೇಶದ ಶಿಕೋಹಾಬಾದ್ ನಿವಾಸಿ 24ರ ಹರೆಯದ ತನು ಅವರದ್ದು ಎಂದು ಗುರುತಿಸಲಾಗಿತ್ತು.

ತನು ಅವರಿಗೆ ಫರಿದಾಬಾದ್‌ನ ರೋಷನ್ ನಗರದ ನಿವಾಸಿ ಅರುಣ್ ಜೊತೆ ಎರಡು ವರ್ಷಗಳ ಹಿಂದೆ ವಿವಾಹವಾಗಿತ್ತು. ವರದಕ್ಷಿಣೆ ಕಿರುಕುಳ ನೀಡಿ ಆಕೆಯ ಪತಿ ಸೇರಿದಂತೆ ಕುಟುಂಬಸ್ಥರು ಕೊಲೆ ಮಾಡಿ ಚರಂಡಿ ಹಗೆದು ಹೂತು ಹಾಕಿರುವ ಆರೋಪ ಕೇಳಿ ಬಂದಿತ್ತು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News