ಜೂನ್ 4ರಂದು ಬಿಜೆಪಿಗೆ ಅಂತಿಮ ಬೀಳ್ಕೊಡುಗೆ: ಅಖಿಲೇಶ್

Update: 2024-05-26 02:42 GMT

Photo : PTI 

ಹೊಸದಿಲ್ಲಿ: ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಜೂನ್ 4ರಂದು ಬಿಜೆಪಿಗೆ ಅಂತಿಮ ಬೀಳ್ಕೊಡುಗೆ ನೀಡಲಾಗುತ್ತದೆ. ಆ ದಿನ ಹಲವು ಮಂದಿಗೆ ಸ್ವಾತಂತ್ರ್ಯದ ದಿನವಾಗಲಿದೆ. ಜೂನ್ 5ರಂದು ಇಂಡಿಯಾ ಮೈತ್ರಿಕೂಟ ಮತ್ತು ಸಮಾಜವಾದಿ ಪಕ್ಷದ ಪಿಡಿಎ ಉಳಿದುಕೊಳ್ಳಲಿದೆ. ಇದು ಐತಿಹಾಸಿಕ ದಿನವಾಗಿದ್ದು, ಎಲ್ಲರಿಗೆ ಸಂಭ್ರಮದ ದಿನವಾಗಲಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಭವಿಷ್ಯ ನುಡಿದಿದ್ದಾರೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಅಂಶವನ್ನು ಅವರು ಸ್ಪಷ್ಟಪಡಿಸಿದರು.

ನಿಮ್ಮ ರಾಜಕೀಯ ಆಕಾಂಕ್ಷೆಗಳು ಲಕ್ನೋಗೆ ಸೀಮಿತ ಎಂದು ಹೇಳುತ್ತಾ ಬಂದಿದ್ದೀರಿ; ಈಗ ಬದಲಾವಣೆ ಆಗಿದೆಯೇ ಎಂದು ಕೇಳಿದ ಪ್ರಶ್ನೆಗೆ, "ಲಕ್ನೋ ಎಂದೂ ಲಕ್ನೋ ಆಗಿಯೇ ಉಳಿಯುತ್ತದೆ. ಲಕ್ನೋವನ್ನು ಯಾರು ತೊರೆಯುತ್ತಾರೆ? ದೆಹಲಿಗೆ ಹಾರಿದವರು ಲಕ್ನೋಗೆ ಮರಳಲೇಬೇಕು" ಎಂದರು.

ಹಲವು ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದ್ದು, ಕೆಲ ಪಕ್ಷಗಳು ಇತ್ತೀಚಿನ ದಿನಗಳಲ್ಲಿ ಹೊರಹೋಗಿವೆ. ಈ ಅನುಭವಗಳು ಭವಿಷ್ಯದಲ್ಲಿ ನಮಗೆ ಮೈತ್ರಿಕೂಟವನ್ನು ಉತ್ತಮವಾಗಿ ನಿಭಾಯಿಸಲು ನೆರವಾಗಲಿವೆ. ಇಂಡಿಯಾ ಮೈತ್ರಿಕೂಟದ ಹಲವು ಮಂದಿ ನಾಯಕರು ಸಭೆಗಳನ್ನು ಹಾಗೂ ಸುಧೀರ್ಘ ಚರ್ಚೆಗಳನ್ನು ನಡೆಸಿರುವುದು ನಮ್ಮ ಬಂಧವನ್ನು ಬೆಳೆಸಲು ನೆರವಾಗಲಿದೆ ಎಂದು ಸಮರ್ಥಿಸಿಕೊಂಡರು.

ಮತದಾರರ ಗಮನ ಸೆಳೆಯಲು ಇಂಡಿಯಾ ಮೈತ್ರಿಕೂಟಕ್ಕೆ ಅನುಕೂಲವಾದ ಅಂಶಗಳ ಬಗ್ಗೆ ಪ್ರಶ್ನಿಸಿದಾಗ, "ಬಿಜೆಪಿಯ ಸುಳ್ಳು ಅತಿಹೆಚ್ಚು ಕೆಲಸ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅದರ ಸಾಧನೆ ಶೂನ್ಯ. ಅವರಿಗೆ ರಾಜಕೀಯ ವಿಶ್ವಾಸಾರ್ಹತೆ ಉಳಿದಿಲ್ಲ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿದೆ. ಉತ್ತರಪ್ರದೇಶದ 7 ವರ್ಷಗಳನ್ನು ಅದಕ್ಕೆ ಸೇರಿಸಿ. ಅವರು ನೀಡಿದ ಹೇಳಿಕೆಗಳು 17 ವರ್ಷಗಳಲ್ಲಿ ಸುಳ್ಳು ಎನ್ನುವುದು ಸಾಬೀತಾಗಿದೆ ಎಂದರು.

ಹೂಡಿಕೆದಾರರ ಸಮಾವೇಶ ಮತ್ತು ಡಿಫೆನ್ಸ್ ಎಕ್ಸ್ಪೋ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಪ್ರಧಾನಿಯಿಂದ ಹಿಡಿದು ರಾಜ್ಯದ ಹಲವು ಶಾಸಕರು ಇದನ್ನು ದೊಡ್ಡದಾಗಿ ಬಿಂಬಿಸಿದರು. ಆದರೆ ತಳಮಟ್ಟದಲ್ಲಿ ಏನೂ ಆಗಿಲ್ಲ. ಒಂದು ಜಿಲ್ಲೆ ಒಂದು ಉತ್ಪನ್ನ ಎನ್ನುವ ಯೋಜನೆ ಕೂಡಾ ವಿಫಲಾಯಿತು. ಸರ್ಕಾರದ ದೃಷ್ಟಿ ಇರುವುದು ಕೇವಲ ಪ್ರಚಾರದಲ್ಲಿ. ಈ ನಾಮ್ ವಾಲಿ ಸರ್ಕಾರವನ್ನು ಜನ ಬಯಸುವುದಿಲ್ಲ. ಕಾಮ್ ವಾಲಿ ಸರ್ಕಾರವನ್ನು ಎದುರು ನೋಡುತ್ತಿದ್ದಾರೆ." ಎಂದು ಮಾರ್ಮಿಕವಾಗಿ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News