Goa ನೈಟ್‌ಕ್ಲಬ್ ದುರಂತ | ಶನಿವಾರ ರಾತ್ರಿ 11:45ಕ್ಕೆ ಬೆಂಕಿ ಬಿದ್ದ ಮಾಹಿತಿ; ರವಿವಾರ ಮಧ್ಯರಾತ್ರಿ 1:17ಕ್ಕೆ ಫುಕೆಟ್ ಗೆ ವಿಮಾನ ಟಿಕೆಟ್ ಬುಕಿಂಗ್!
ಕೇವಲ ಒಂದೂವರೆ ಗಂಟೆಯಲ್ಲಿ ದೇಶ ಬಿಟ್ಟು ಪರಾರಿ ಯೋಜನೆ ರೂಪಿಸಿದ್ದ ಲುತ್ರಾ ಸಹೋದರರು
ಗೋವಾ: ಉತ್ತರ ಗೋವಾದ ಬರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್ ನಲ್ಲಿ ಶನಿವಾರ–ರವಿವಾರದ ಮಧ್ಯರಾತ್ರಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ 25 ಮಂದಿ ಜೀವ ಕಳೆದುಕೊಂಡ ವೇಳೆ, ಕ್ಲಬ್ ನ ಮಾಲೀಕತ್ವ ಹೊಂದಿದ್ದ ಲುತ್ರಾ ಸಹೋದರರು ದುರಂತದ ಒಂದೂವರೆ ಗಂಟೆಯೊಳಗೆ ದೇಶಬಿಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರೆಂಬ ಮಾಹಿತಿಯನ್ನು ಗೋವಾ ಪೊಲೀಸರು ಬುಧವಾರ ಬಹಿರಂಗಗೊಳಿಸಿದ್ದಾರೆ.
ರಾತ್ರಿ 11:45ಕ್ಕೆ ನೈಟ್ ಕ್ಲಬ್ ನಿಂದ ಅಗ್ನಿಶಾಮಕ ದಳಕ್ಕೆ ಮೊದಲ ಕರೆ ಹೋಗಿತ್ತು. ಆ ವೇಳೆಗೆ ಸುಮಾರು 100 ಮಂದಿ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದರು. ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಕವಾಗಿ ಹರಡಿದ ಪರಿಣಾಮ, ಹಲವರು ಒಳಗೆ ಸಿಕ್ಕಿಬಿದ್ದರು. ಅಗ್ನಿಶಾಮಕ ದಳಗಳು ಮತ್ತು ತುರ್ತು ಸೇವೆಗಳು ಬೆಳಿಗ್ಗೆ 6ರವರೆಗೆ ರಕ್ಷಣಾ ಮತ್ತು ಪುನಶ್ಚೇತನ ಕಾರ್ಯಾಚರಣೆ ಮುಂದುವರಿಸಿಕೊಂಡಿದ್ದವು.
“ಡಿಸೆಂಬರ್ 7ರ ಬೆಳಿಗ್ಗೆ 1:17ಕ್ಕೆ ಸೌರಭ್ ಮತ್ತು ಗೌರವ್ ಲುತ್ರಾ ಎಂಬ ಸಹೋದರರು ಥೈಲ್ಯಾಂಡ್‌ನ ಫುಕೆಟ್‌ಗೆ ವಿಮಾನ ಟಿಕೆಟ್‌ಗಳನ್ನು make my trip ಮೂಲಕ ಬುಕ್ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲೇ ಆರೋಪಿಗಳು ಪರಾರಿ ಸಿದ್ಧತೆಯಲ್ಲಿ ನಿರತರಾಗಿದ್ದರು,” ಎಂದು ಗೋವಾ ಪೊಲೀಸ್ PRO ನಿಲೇಶ್ ರಾಣೆ ತಿಳಿಸಿದ್ದಾರೆ.
ತನಿಖೆಯ ಪ್ರಕಾರ, ಲುಥ್ರಾ ಸಹೋದರರು ಅದೇ ದಿನ ಬೆಳಿಗ್ಗೆ 5:30ಕ್ಕೆ ದಿಲ್ಲಿಯಿಂದ ಇಂಡಿಗೋ 6E 1073 ವಿಮಾನದಲ್ಲಿ ಫುಕೆಟ್‌ಗೆ ಹೊರಟಿದ್ದರು ಎಂದು ತಿಳಿದು ಬಂದಿದೆ.
ದುರಂತದ ನಂತರ ಪೊಲೀಸರು ಆರೋಪಿಗಳಿಗೆ ಪರಾರಿಯಾಗಲು ನೆರವಾದರೆಂಬ ಆರೋಪಗಳನ್ನು ಇಲಾಖೆ ತಳ್ಳಿ ಹಾಕಿದೆ.
“ಈ ಆರೋಪ ಸಂಪೂರ್ಣ ಸುಳ್ಳು. ನಾವು ರಾತ್ರಿಯಿಡೀ ಸ್ಥಳದಲ್ಲಿ ತುರ್ತು ಕಾರ್ಯಾಚರಣೆ ನಡೆಸುತ್ತಿದ್ದೆವು. ದುರಂತದ ಪ್ರಮಾಣ ತಿಳಿಯುವ ಮೊದಲೇ ಆರೋಪಿಗಳು ದೇಶ ತೊರೆದಿದ್ದಾರೆ,” ಎಂದು ಪೊಲೀಸ್ ಹೇಳಿಕೆಯಲ್ಲಿದೆ.
ಆರೋಪಿಗಳ ಪತ್ತೆ ಮತ್ತು ಬಂಧನಕ್ಕಾಗಿ ಇಂಟರ್‌ಪೋಲ್ ಮುಖೇನ ಅಂತರರಾಷ್ಟ್ರೀಯ ಸಮನ್ವಯ ಪ್ರಕ್ರಿಯೆ ಆರಂಭಿಸಲಾಗಿದೆ.
ಈ ಪ್ರಕರಣದಲ್ಲಿ ಐದು ಮಂದಿ ಸಿಬ್ಬಂದಿ ಹಾಗೂ ಲುಥ್ರಾ ಸಹೋದರರ ವ್ಯವಹಾರ ಪಾಲುದಾರ ಅಜಯ್ ಗುಪ್ತಾ ಈಗಾಗಲೇ ಬಂಧಿತರಾಗಿದ್ದಾರೆ. ಆದರೆ ಇಬ್ಬರು ಮಾಲೀಕರು ಇನ್ನೂ ಪತ್ತೆಯಾಗಿಲ್ಲ.
ದೇಶ ಬಿಟ್ಟು ಪರಾರಿಯಾದ ಆರೋಪ ಎದುರಿಸುತ್ತಿರುವ ಸೌರಭ್ ಮತ್ತು ಗೌರವ್ ಲುಥ್ರಾ ದಿಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಬುಧವಾರ ಮಧ್ಯಂತರ ಪರಿಹಾರ ನೀಡುವುದನ್ನು ನಿರಾಕರಿಸಿ ವಿಚಾರಣೆಯನ್ನು ಮುಂದಿನ ದಿನಕ್ಕೆ ಮುಂದೂಡಿದೆ.
ತಮ್ಮ ಪ್ರತಿವಾದದಲ್ಲಿ, “ನಾವು ಕ್ಲಬ್‌ನ ಮಾಲಕರಲ್ಲ, ಪರವಾನಗಿ ಪಡೆದ ನಿರ್ವಾಹಕರಷ್ಟೇ” ಎಂದು ಅವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.