×
Ad

ಪ್ರಥಮ ಜಿಬಿಎಸ್ ಶಂಕಿತ ಸಾವು; 100 ದಾಟಿದ ಸೋಂಕಿತರ ಸಂಖ್ಯೆ

Update: 2025-01-27 07:52 IST

PC: x.com/Sentinel_Assam

ಪುಣೆ: ಮಹಾರಾಷ್ಟ್ರದಲ್ಲಿ ಮೊಟ್ಟಮೊದಲ ಶಂಕಿತ ಗುಲಿಯನ್ ಬರ್ರೆ ಸಿಂಡ್ರೋಮ್ (ಜಿಬಿಎಸ್) ಸಂಬಂಧಿತ ಸಾವಿನ ಪ್ರಕರಣ ವರದಿಯಾಗಿದ್ದು, 28 ಹೊಸ ಪ್ರಕರಣಗಳು ಬೆಳಕಿಗೆ ಬರುವ ಮೂಲಕ ಪುಣೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 101ಕ್ಕೇರಿದೆ. ಆರೋಗ್ಯ ಸಮೀಕ್ಷಾ ಮಾಹಿತಿಯ ದತ್ತಾಂಶಗಳನ್ನು ಆಧರಿಸಿ ಈ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಸೊಲ್ಲಾಪುರ ಜಿಲ್ಲೆಯಲ್ಲಿ ಶಂಕಿತ ಜಿಬಿಎಸ್ ಸಾವು ಸಂಭವಿಸಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಬಗ್ಗೆ ಯಾವುದೇ ವಿವರ ನೀಡಿಲ್ಲ.

ತೀವ್ರ ಅಸ್ವಸ್ಥರಾಗಿರುವ 16 ಮಂದಿ ಈ ಅಪರೂಪದ ಸೋಂಕಿನ ಹಿನ್ನೆಲೆಯಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಶಂಕಿತರ ಪೈಕಿ 19 ಮಂದಿಯಲ್ಲಿ ರೋಗಲಕ್ಷಣಗಳು 9ಕ್ಕಿಂತ ಕಡಿಮೆ ಇದ್ದು, 50-80 ವರ್ಷ ವಯೋಮಾನದರಲ್ಲಿ 23 ಸೋಂಕು ಪ್ರಕರಣಗಳು ವರದಿಯಾಗಿವೆ.

ಜನವರಿ 9ರಂದು ಪುಣೆಯಲ್ಲಿ ಮೊಟ್ಟಮೊದಲ ಶಂಕಿತ ಜಿಬಿಎಸ್ ಪ್ರಕರಣ ವರದಿಯಾಗಿತ್ತು. ಆಸ್ಪತ್ರೆಗೆ ದಾಖಲಾದ ರೋಗಿಗಳಿಂದ ಪಡೆಯಲಾದ ಜೈವಿಕ ಮಾದರಿಗಳಲ್ಲಿ ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಸಿ ಜೆಜುನಿ ಬ್ಯಾಕ್ಟೀರಿಯಾ ವಿಶ್ವದೆಲ್ಲೆಡೆ ವರದಿಯಾದ ಒಟ್ಟು ಪ್ರಕರಣಗಳ ಪೈಕಿ ಮೂರನೇ ಒಂದರಷ್ಟು ಪ್ರಕರಣಗಳಿಗೆ ಕಾರಣವಾಗಿದೆ. ಇದು ತೀವ್ರತರ ಸೋಂಕಿಗೆ ಕೂಡಾ ಕಾರಣವಾಗುತ್ತದೆ.

ಪುಣೆಯ ಅಧಿಕಾರಿಗಳು ಅತ್ಯಧಿಕ ಪ್ರಕರಣಗಳು ವರದಿಯಾದ ಪ್ರದೇಶಗಳ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆಗೆ ಗುರಿಪಡಿಸಿದ್ದಾರೆ. ಇದರ ವರದಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದ್ದು, ಪುಣೆಯ ಮುಖ್ಯ ಜಲಮೂಲ ಎನಿಸಿದ ಖಡಕ್ವಾಲ್ಸಾ ಅಣೆಕಟ್ಟಿನ ಬಳಿಯ ಬಾವಿಯೊಂದರಲ್ಲಿ ಅತ್ಯಧಿಕ ಮಟ್ಟದ ಬ್ಯಾಕ್ಟೀರಿಯಮ್ ಇ ಪತ್ತೆಯಾಗಿದೆ. ಆದರೆ ಈ ಬಾವಿಯ ನೀರನ್ನು ಬಳಕೆ ಮಾಡಲಾಗುತ್ತದೆಯೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ನೀರನ್ನು ಕುದಿಸಿ ಆರಿಸಿ ಕುಡಿಯುವಂತೆ ಅಧಿಕಾರಿಗಳು ಸಲಹೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News