ಗುಜರಾತ್ ನಲ್ಲಿ ಪ್ರವಾಹ: 12 ಹೆದ್ದಾರಿಗಳು ಬಂದ್, 736 ಮಂದಿ ಸ್ಥಳಾಂತರ, 358 ಜನರ ರಕ್ಷಣೆ
ಅಹಮದಾಬಾದ್: ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಪೋರ್ ಬಂದರ್ ಹಾಗೂ ಕಚ್ ನಲ್ಲಿ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಗೂ 10 ರಾಜ್ಯ ಹೆದ್ದಾರಿಗಳನ್ನು ಮುಚ್ಚಿದೆ.
ಒಟ್ಟು 736 ಜನರನ್ನು ಸುರಕ್ಷಿತ ಸ್ಥಳಗಳಲ್ಲಿ ಸ್ಥಳಾಂತರಿಸಲಾಗಿದೆ. ಸುಮಾರು 358 ಜನರನ್ನು ರಕ್ಷಿಸಲಾಗಿದೆ ಎಂದು ಗುಜರಾತ್ ಪರಿಹಾರ ಆಯುಕ್ತ ಅಲೋಕ್ ಪಾಂಡೆ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಶನಿವಾರ ರಾತ್ರಿ ಗಾಂಧಿನಗರದಲ್ಲಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಪರಿಶೀಲನಾ ಸಭೆಯನ್ನು ನಡೆಸಿದರು. ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಅವಲೋಕಿಸಲು ಜುನಾಗಢಕ್ಕೆ ತೆರಳಲು ಯತ್ನಿಸಿದ ಮುಖ್ಯಮಂತ್ರಿ ಪಟೇಲ್ ಅವರು ಜಿಲ್ಲಾ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದರು.
ಎಲ್ಲ 302 ರಸ್ತೆಗಳನ್ನು ಮುಚ್ಚಲಾಗಿದೆ. ಇದರಲ್ಲಿ 271 ಪಂಚಾಯತ್ ರೋಡ್ ಗಳು ಸೇರಿವೆ. ಜುನಾಗಡ, ವಲ್ಸಾಡ್, ಗಿರ್-ಸೋಮನಾಥ್, ಪೋರ್ಬಂದರ್ ಹಾಗೂ ಇತರ ಜಿಲ್ಲೆಗಳಲ್ಲಿ ಡ್ಯಾಮ್ ಗಳಲ್ಲಿ ನೀರು ಹೆಚ್ಚಾಗಿದೆ. ನರ್ಮದಾ ಡ್ಯಾಂ ಶೇ.67ರಷ್ಟು ಭರ್ತಿಯಾದರೆ, ಇತರ ಡ್ಯಾಮ್ ಗಳು ಸಂಪೂರ್ಣ ಭರ್ತಿಯಾಗಿವೆ ಎಂದು ಪಾಂಡೆ ಹೇಳಿದ್ದಾರೆ.