ಕೆಲವರಿಗೆ ಮೋದಿಯೇ ಮೊದಲು: ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಮಲ್ಲಿಕಾರ್ಜುನ ಖರ್ಗೆ / ಶಶಿ ತರೂರ್ (Photo: PTI)
ಹೊಸದಿಲ್ಲಿ: ಕೆಲವರಿಗೆ ಮೋದಿಯೇ ಮೊದಲು ಎಂದು ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿಯನ್ನು ನಡೆಸಿದ್ದಾರೆ.
ದಿಲ್ಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಭಾಗವಾಗಿರುವುದಕ್ಕೆ ಒಂದೇ ಕಾರಣ ಅವರ ʼಇಂಗ್ಲಿಷ್ ತುಂಬಾ ಒಳ್ಳೆಯದಿದೆ' ಎಂದು ಹೇಳಿದ್ದಾರೆ.
ʼನನಗೆ ಇಂಗ್ಲಿಷ್ ಓದಲು ಬರುವುದಿಲ್ಲ, ಅವರ ಭಾಷೆ ತುಂಬಾ ಚೆನ್ನಾಗಿದೆ. ಅದಕ್ಕಾಗಿಯೇ ನಾವು ಅವರನ್ನು ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಿದ್ದೇವೆ. ಆದರೆ ನಾನು ಹೇಳಲು ಬಯಸುವುದೇನೆಂದರೆ, ನಾವೆಲ್ಲರೂ, ಇಡೀ ವಿರೋಧ ಪಕ್ಷ ಒಗ್ಗಟ್ಟಿನಿಂದ ನಮ್ಮ ಸೈನ್ಯದೊಂದಿಗೆ ಇದ್ದೇವೆ. ಆಪರೇಷನ್ ಸಿಂಧೂರ್ ವೇಳೆ ಒಟ್ಟಾಗಿ ನಿಂತಿದ್ದೇವೆ. ದೇಶ ಮೊದಲು ಎಂದು ಹೇಳಿದ್ದೇವೆ, ಕೆಲವರು ಮೋದಿ ಮೊದಲು, ದೇಶ ನಂತರ ಬರುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ನಾವು ಏನು ಮಾಡಬೇಕು?ʼ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರವು ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ʼಸಂವಿಧಾನ ಹತ್ಯಾ ದಿವಸ್ʼ ನಾಟಕವಾಡುತ್ತಿದೆ. ಸಹಿಷ್ಣುತೆ ಇಲ್ಲದ ಮತ್ತು ಭ್ರಾತೃತ್ವ ಮತ್ತು ಸ್ವಾತಂತ್ರ್ಯವನ್ನು ಸಮೃದ್ಧಗೊಳಿಸಲು ಬಿಡದ ಸರಕಾರಕ್ಕೆ ಇತರರಿಗೆ ಉಪನ್ಯಾಸ ನೀಡುವ ಹಕ್ಕಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಪ್ರಕಟವಾದ ಲೇಖನವೊಂದರಲ್ಲಿ ಶಶಿ ತರೂರ್, ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿ, ಚೈತನ್ಯ ಮತ್ತು ತೊಡಗಿಸಿಕೊಳ್ಳುವ ಇಚ್ಛಾಶಕ್ತಿ ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಪ್ರಮುಖ ಆಸ್ತಿಯಾಗಿ ಉಳಿದಿದೆ ಎಂದು ಹೇಳಿದ್ದರು. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿರಬಹುದು ಹೊರತು ಕಾಂಗ್ರೆಸ್ ಪಕ್ಷದ ಅಭಿಪ್ರಾಯವಲ್ಲ ಎಂದು ಕಾಂಗ್ರೆಸ್ ಪಕ್ಷ ಶಶಿ ತರೂರ್ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು.