ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಜಾಗತಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 91 ವಿವಿಗಳು
ಐಐಎಸ್ಸಿ | Photo: NDTV
ಹೊಸದಿಲ್ಲಿ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ದಾಖಲೆ ಸಂಖ್ಯೆಯ 91 ವಿಶ್ವವಿದ್ಯಾನಿಲಯಗಳು ಜಾಗತಿಕ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿವೆಯೆಂದು ಪ್ರತಿಷ್ಠಿತ ಟೈಮ್ಸ್ ಹೈಯರ್ ಎಜುಕೇಶನ್ (ಟಿಎಚ್ಇ) ಮ್ಯಾಗಝಿನ್ ಪ್ರಕಟಿಸಿದೆ. 2017ನೇ ಇಸವಿಯಿಂದೀಚೆಗೆ ಇದೇ ಮೊದಲ ಬಾರಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ 250ನೇ ಸ್ಥಾನವನ್ನು ಪಡೆದುಕೊಂಡಿದೆ.
ರಾಷ್ಟ್ರಮಟ್ಟದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ (ಐಐಎಸ್ಸಿ) ಶ್ರೇಷ್ಠ ವಿವಿ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬ್ರಿಟನ್ ನ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ, ಅಮೆರಿಕದ ಸ್ಟಾನ್ಫೋರ್ಡ್ ವಿವಿ ಜಾಗತಿಕ ಪಟ್ಟಿಯಲ್ಲಿ ಕ್ರಮವಾಗಿ ಮೊದಲನೆ ಹಾಗೂ ಎರಡನೆ ಸ್ಥಾನ ಪಡೆದ ವಿಶ್ವವಿದ್ಯಾನಿಲಯಗಳಾಗಿವೆ.
ಹಲವಾರು ಭಾರತೀಯ ತಂತ್ರಜ್ಞಾನ ವಿದ್ಯಾಲಯ (ಐಐಟಿ)ಗಳು ಸತತ ನಾಲ್ಕನೆ ವರ್ಷವೂ ಜಾಗತಿಕ ರ್ಯಾಂಕಿಂಗ್ ಪಟ್ಟಿಯನ್ನು ಬಹಿಷ್ಕರಿಸಿರುವ ಹೊರತಾಗಿಯೂ ಪ್ರಸಕ್ತ ಜಾಗತಿಕ ವಿವಿ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ 91 ವಿವಿಗಳು ಸ್ಥಾನ ಪಡೆದಿರುವುದು ಗಣನೀಯ ಬೆಳವಣಿಗೆಯಾಗಿದೆ. ಕಳೆದ ವರ್ಷ ಭಾರತದ 75 ವಿಶ್ವವಿದ್ಯಾನಿಲಯಗಳು ಜಾಗತಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ರ್ಯಾಂಕಿಂಗ್ಗಾಗಿ 108 ದೇಶಗಳ 1904 ವಿಶ್ವವಿದ್ಯಾನಿಲಯಗಳ ಸಮೀಕ್ಷೆಯನ್ನು ನಡೆಸಲಾಗಿತ್ತು.
ಜಾಗತಿಕ ವಿವಿ ರ್ಯಾಂಕಿಂಗ್ ನಲ್ಲಿ ಭಾರತವು ನಾಲ್ಕನೇ ಅತ್ಯುತ್ತಮವಾಗಿ ಪ್ರತಿನಿಧಿಸಲ್ಪಟ್ಟ ದೇಶಗಳ ಸಾಲಿನಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಕಳೆದ ವರ್ಷ ಅದು ಆರನೇ ಸ್ಥಾನದಲ್ಲಿತ್ತು.
ನೂತನ ರ್ಯಾಂಕಿಂಗ್ ಪ್ರಕಾರ ಅಣ್ಣಾ ವಿವಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಮಹಾತ್ಮಾಗಾಂಧಿ ವಿವಿ, ಶೂಲಿನಿ ಜೈವಿಕತಂತ್ರಜ್ಞಾನ ಹಾಗೂ ಮ್ಯಾನೇಜ್ಮೆಂಟ್ ಸಯನ್ಸ್ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಪ್ರದರ್ಶಿಸಿದ ಭಾರತೀಯ ವಿವಿಗಳ ಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆಯುವಲ್ಲಿ ಸಫಲವಾಗಿವೆ.
ಏಶ್ಯಾದಲ್ಲಿ ಒಟ್ಟಾರೆಯಾಗಿ ಚೀನಾವು ಅತ್ಯುತ್ತಮ ರ್ಯಾಂಕಿಂಗ್ ಪಡೆದಿರುವ ವಿಶ್ವವಿದ್ಯಾನಿಲಯಗಳ ಸಾಲಿನಲ್ಲಿ ಸ್ಥಾನವನ್ನು ಪಡೆದಿವೆ.