ಬಿಜೆಪಿಯ ಮಾಜಿ ವಕ್ತಾರೆ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ!
ನ್ಯಾಯಾಂಗ ವ್ಯವಸ್ಥೆಯನ್ನು ರಾಜಕೀಯಗೊಳಿಸಬೇಡಿ : ವಿಪಕ್ಷಗಳಿಂದ ಆಕ್ರೋಶ
Source: LinkedIn
ಮುಂಬೈ: ಮಹಾರಾಷ್ಟ್ರ ಬಿಜೆಪಿಯ ಮಾಜಿ ವಕ್ತಾರೆ ಆರತಿ ಸಾಠೆ ಅವರನ್ನು ಬಾಂಬೆ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದ್ದು, ಇದು ಬಾರೀ ವಿವಾದಕ್ಕೆ ಕಾರಣವಾಗಿದೆ.
ಜು.25ರಂದು ಸುಪ್ರೀಂ ಕೋರ್ಟ್ ಅಜಿತ್ ಕಡೇಹಂಕರ್, ಆರತಿ ಸಾಠೆ ಮತ್ತು ಸುಶೀಲ್ ಘೋಡೇಶ್ವರ್ ಅವರನ್ನು ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಕಕ್ಕೆ ಅನುಮೋದಿಸಿತ್ತು.
2023ರ ಫೆಬ್ರವರಿಯಲ್ಲಿ ಆರತಿ ಸಾಠೆ ಅವರನ್ನು ಮಹಾರಾಷ್ಟ್ರ ಬಿಜೆಪಿಯ ಅಧಿಕೃತ ವಕ್ತಾರರನ್ನಾಗಿ ನೇಮಕ ಮಾಡಲಾಯಿತು. ಇದಾದ ಸುಮಾರು ಒಂದು ವರ್ಷದ ನಂತರ ಜನವರಿ 2024 ರಲ್ಲಿ ಅವರು "ವೈಯಕ್ತಿಕ ಮತ್ತು ವೃತ್ತಿಪರ ಕಾರಣಗಳನ್ನು" ನೀಡಿ ಈ ಹುದ್ದೆಗೆ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಸುಮಾರು 19 ತಿಂಗಳ ನಂತರ 2025ರ ಜುಲೈ 28ರಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ, ಆರತಿ ಸಾಠೆ ಸೇರಿದಂತೆ ಮೂವರನ್ನು ಬಾಂಬೆ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಲು ಶಿಫಾರಸು ಮಾಡಿದೆ.
ಸುಮಾರು 20 ವರ್ಷಗಳ ಕಾಲ ವಕೀಲಿ ವೃತ್ತಿಯಲ್ಲಿ ಅನುಭವ ಹೊಂದಿರುವ ಆರತಿ ಅರುಣ್ ಸಾಠೆ, ಪ್ರತ್ಯಕ್ಷ ತೆರಿಗೆ ವಿಷಯಗಳಲ್ಲಿ ಪರಿಣತಿ ಸಾಧಿಸಿದ್ದಾರೆ. ಅವರ ತಂದೆ ಅರುಣ್ ಸಾಠೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷದ ಜೊತೆ ದೀರ್ಘಕಾಲದ ನಂಟು ಹೊಂದಿದವರು ಮತ್ತು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು. ಆರತಿ ಸಾಠೆ ಅವರು ಕೂಡ ಮುಂಬೈ ಬಿಜೆಪಿ ಕಾನೂನು ಘಟಕದ ಮುಖ್ಯಸ್ಥರಾಗಿದ್ದರು.
ಈ ಬೆಳವಣಿಗೆ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ರಾಜಕೀಯಗೊಳಿಸಬೇಡಿ ಎಂದು ವಿಪಕ್ಷಗಳು ಆಗ್ರಹಿಸಿದೆ. ನ್ಯಾಯಾಧೀಶರ ಹುದ್ದೆಯಿಂದ ಅವರನ್ನು ಬಿಡುಗಡೆ ಮಾಡುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ನಿಷ್ಪಕ್ಷಪಾತವನ್ನು ಕಾಪಾಡಬೇಕು ಎಂದು ಆಗ್ರಹಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎನ್ ಸಿಪಿ ಶಾಸಕ ರೋಹಿತ್ ಪವಾರ್, ಸಾಠೆ ಅವರನ್ನು 2023ರ ಫೆಬ್ರವರಿ 2ರಂದು ಬಿಜೆಪಿ ವಕ್ತಾರರನ್ನಾಗಿ ನೇಮಿಸಲಾಗಿತ್ತು. ಆಡಳಿತ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬರು ನ್ಯಾಯಪೀಠದಲ್ಲಿ ಕುಳಿತಾಗ ಅವರ ತೀರ್ಪುಗಳು ರಾಜಕೀಯ ಪ್ರೇರಿತವಾಗಿರುವುದಿಲ್ಲ ಎಂದು ಯಾರು ಖಾತರಿ ನೀಡಬಲ್ಲರು? ಇಂತಹ ಒಂದು ನೇಮಕಾತಿ, ಇಡೀ ನ್ಯಾಯದಾನ ಪ್ರಕ್ರಿಯೆಯ ಮೇಲೆಯೇ ಅನುಮಾನದ ನೆರಳು ಬೀಳುವಂತೆ ಮಾಡುವುದಿಲ್ಲವೇ? ಕಾರ್ಯಾಂಗ ಮತ್ತು ನ್ಯಾಯಾಂಗ ಬೇರೆ ಬೇರೆಯಾಗಿರಬೇಕು ಎಂಬ ಸಂವಿಧಾನದ ಮೂಲಭೂತ ತತ್ವಕ್ಕೆ ಈ ನೇಮಕಾತಿ ವಿರುದ್ಧವಾಗಿಲ್ಲವೇ? ಇದು ನ್ಯಾಯಾಂಗವನ್ನು ರಾಜಕೀಯ ಅಖಾಡವನ್ನಾಗಿ ಪರಿವರ್ತಿಸುವ ಪ್ರಯತ್ನವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನಾನು ಆರತಿ ಸಾಠೆ ಅವರ ವೃತ್ತಿಪರ ಅರ್ಹತೆಗಳನ್ನು ಪ್ರಶ್ನಿಸುತ್ತಿಲ್ಲ, ಆದರೆ ಅವರ ರಾಜಕೀಯ ಹಿನ್ನೆಲೆ ನ್ಯಾಯಾಂಗದ ನಿಷ್ಪಕ್ಷಪಾತಕ್ಕೆ ಧಕ್ಕೆಯಾಗುತ್ತದೆ ಎಂಬುದು ನನ್ನ ಕಾಳಜಿ. ಈ ಶಿಫಾರಸನ್ನು ಮರುಪರಿಶೀಲಿಸಬೇಕು ಮತ್ತು ಈ ವಿಷಯದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮಧ್ಯಪ್ರವೇಶಿಸಿ ಮಾರ್ಗದರ್ಶನ ನೀಡಬೇಕು ಎಂದು ರೋಹಿತ್ ಪವಾರ್ ಆಗ್ರಹಿಸಿದ್ದಾರೆ.
ಪ್ರತಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ, ಆರತಿ ಸಾಠೆ ಅವರ ನೇಮಕಾತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. "ಆರತಿ ಸಾಠೆ ಅವರು ನ್ಯಾಯಾಧೀಶರಾಗಿ ಶಿಫಾರಸುಗೊಳ್ಳುವ ಬಹಳ ಮೊದಲೇ, ಅಂದರೆ ಒಂದು ವರ್ಷಕ್ಕೂ ಮುನ್ನವೇ ಪಕ್ಷದ ವಕ್ತಾರ ಸ್ಥಾನಕ್ಕೆ ಮತ್ತು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ," ಎಂದು ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ನವನಾಥ್ ಬಾನ್ ಹೇಳಿದ್ದಾರೆ.
"ರಾಜಕೀಯ ಹಿನ್ನೆಲೆಯುಳ್ಳವರು ನ್ಯಾಯಾಧೀಶರಾದ ಉದಾಹರಣೆಗಳು ಹಿಂದೆಯೂ ಇವೆ. ಕಾಂಗ್ರೆಸ್ ಆಡಳಿತದಲ್ಲಿ, ನ್ಯಾಯಮೂರ್ತಿ ಬಹಾರುಲ್ ಇಸ್ಲಾಂ ಅವರು ಕಾಂಗ್ರೆಸ್ನಿಂದ ರಾಜ್ಯಸಭಾ ಸದಸ್ಯರಾಗಿದ್ದರು. ನಂತರ ಅವರು ನ್ಯಾಯಾಧೀಶರಾಗಿ, ನಿವೃತ್ತರಾಗಿ ಮತ್ತೆ ಕಾಂಗ್ರೆಸ್ನಿಂದಲೇ ರಾಜ್ಯಸಭೆಗೆ ನೇಮಕಗೊಂಡಿದ್ದರು. ಇದರ ಬಗ್ಗೆ ಕಾಂಗ್ರೆಸ್ ಮತ್ತು ರೋಹಿತ್ ಪವಾರ್ ಏನು ಹೇಳುತ್ತಾರೆ?" ಎಂದು ಅವರು ಪ್ರಶ್ನಿಸಿದ್ದಾರೆ. ಆರತಿ ಸಾಠೆ ಅವರ ಆಯ್ಕೆ ಸಂಪೂರ್ಣವಾಗಿ ಅವರ ಅರ್ಹತೆಯ ಆಧಾರದ ಮೇಲೆ, ಕೊಲಿಜಿಯಂನ ನಿರ್ಧಾರದಂತೆ ನಡೆದಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.