ಕದನ ವಿರಾಮ ಘೋಷಣೆ ಬಳಿಕ ಟ್ರೋಲ್ ಎದುರಿಸಿದ ವಿಕ್ರಮ್ ಮಿಶ್ರಿ ಬೆಂಬಲಕ್ಕೆ ನಿಂತ ಮಾಜಿ ವಿದೇಶಾಂಗ ಕಾರ್ಯದರ್ಶಿ
ವಿಕ್ರಮ್ ಮಿಶ್ರಿ (Photo: PTI)
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಮೇ 10ರಂದು ಒಪ್ಪಂದ ಮಾಡಿಕೊಂಡ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಟ್ರೋಲ್ ಎದುರಿಸಿದರು. ಅವರಿಗೆ ಸಂಸದರಾದ ಅಸಾದುದ್ದೀನ್ ಉವೈಸಿ, ಅಖಿಲೇಶ್ ಯಾದವ್ ಮತ್ತು ಹಿರಿಯ ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಇಂತಹ ಹೇಳಿಕೆಗಳು ದೇಶಕ್ಕಾಗಿ ಹಗಲಿರುಳು ಶ್ರಮಿಸುವ ಪ್ರಾಮಾಣಿಕ ಅಧಿಕಾರಿಗಳ ನೈತಿಕತೆಯನ್ನು ದುರ್ಬಲಗೊಳಿಸುತ್ತದೆ.
ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರಕಾರದ ಜವಾಬ್ದಾರಿ ಹೊರತು ವೈಯಕ್ತಿಕ ಅಧಿಕಾರಿಗಳದ್ದಲ್ಲ. ಕೆಲವು ಸಮಾಜ ವಿರೋಧಿ ಕ್ರಿಮಿನಲ್‌ಗಳು, ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರನ್ನು ಎಲ್ಲೆ ಮೀರಿ ನಿಂದಿಸುತ್ತಿದ್ದಾರೆ. ಆದರೆ, ಬಿಜೆಪಿ ಸರಕಾರ ಅಥವಾ ಯಾವುದೇ ಸಚಿವರು ಅವರ ಗೌರವವನ್ನು ರಕ್ಷಿಸಲು ಅಥವಾ ಅಂತಹ ಅನಗತ್ಯ ಪೋಸ್ಟ್‌ಗಳನ್ನು ಮಾಡುವವರ ವಿರುದ್ಧ ಕ್ರಮವನ್ನು ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಹೇಳಿದರು.
ನಾಲ್ಕು ದಿನಗಳ ಕಾಲ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಬಳಿಕ ಭಾರತ ಮತ್ತು ಪಾಕಿಸ್ತಾನ ಶನಿವಾರ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವ ಕದನ ವಿರಾಮ ಒಪ್ಪಂದ ಮಾಡಿಕೊಂಡಿದೆ. ವಿದೇಶಾಂಗ ಕಾರ್ಯದರ್ಶಿ ಮಿಶ್ರಿ ಶನಿವಾರ ಸಂಜೆ ಈ ಕುರಿತು ಘೋಷಣೆ ಮಾಡಿದ್ದರು.
ಮಿಶ್ರಿ ಟ್ರೋಲ್ ಎದುರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್, ಇದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ. ಇದು ಸಭ್ಯತೆಯ ಎಲ್ಲಾ ಎಲ್ಲೆಗಳನ್ನು ಮೀರುತ್ತದೆ ಎಂದು ಹೇಳಿದರು.
ಸಮರ್ಪಿತ ರಾಜತಾಂತ್ರಿಕ ಅಧಿಕಾರಿಗಳಾದ ಮಿಶ್ರಿ, ವೃತ್ತಿಪರತೆ ಮತ್ತು ದೃಢಸಂಕಲ್ಪದಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಮತ್ತು ಅವರ ಕುಟುಂಬವನ್ನು ದೂಷಿಸುವುದು ಸರಿಯಲ್ಲ. ಪ್ರೀತಿಪಾತ್ರರನ್ನು ನಿಂದಿಸುವುದು ಎಲ್ಲಾ ಸಭ್ಯತೆಯ ಎಲ್ಲೆಯನ್ನು ಮೀರುತ್ತದೆ. ಈ ವಿಷಯುತವಾದ ದ್ವೇಷ ನಿಲ್ಲಬೇಕು ಎಂದು ಹೇಳಿದರು.
ಎಐಎಂಐಎಂ ಮುಖ್ಯಸ್ಥರಾದ ಅಸದುದ್ದೀನ್ ಉವೈಸಿ ಕೂಡ ರವಿವಾರ ಮಿಶ್ರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಕ್ರಮ್ ಮಿಶ್ರಿ ಓರ್ವ ಸಭ್ಯ, ಪ್ರಾಮಾಣಿಕ, ಕಠಿಣ ಪರಿಶ್ರಮಿ ರಾಜತಾಂತ್ರಿಕರು, ನಮ್ಮ ರಾಷ್ಟ್ರಕ್ಕಾಗಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಅಧಿಕಾರಿಗಳು ಕಾರ್ಯಾಂಗದ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದೇ ಸರಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಅವರನ್ನು ದೂಷಿಸಬಾರದು ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.