ಪಶ್ಚಿಮ ಬಂಗಾಳ | ಶಿಕ್ಷಣ ಸಚಿವರ ಕಾರಿನ ಮೇಲೆ ದಾಳಿ ಪ್ರಕರಣ : ದಿಲ್ಲಿ ವಿಮಾನ ನಿಲ್ದಾಣದಲ್ಲಿ ಜಾದವ್‌ಪುರ ವಿವಿ ಹಳೆ ವಿದ್ಯಾರ್ಥಿಯ ಬಂಧನ
ಹಿಂದೋಲ್ ಮಜುಂದಾರ್ (Photo credit: telegraphindia.com)
ಹೊಸದಿಲ್ಲಿ : ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರಾತ್ಯ ಬಸು ಅವರ ಬೆಂಗಾವಲು ವಾಹನದ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾದವ್‌ಪುರ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯನ್ನು ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
ಸಚಿವರ ಮೇಲಿನ ದಾಳಿಯ ಹಿಂದಿನ ಪ್ರಮುಖ ಸಂಚುಕೋರ ಹಿಂದೋಲ್ ಮಜುಂದಾರ್ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಸ್ಪೇನ್‌ನ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಅವರ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದ್ದ ಹಿನ್ನೆಲೆ ಸ್ಪೇನ್‌ನಿಂದ ದೇಶಕ್ಕೆ ಬಂದಿಳಿದ ಕೂಡಲೇ ಅವರನ್ನು ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
“ಹಿಂದೋಲ್ ಮಜುಂದಾರ್ ಜಾದವ್‌ಪುರ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಯಾಗಿದ್ದು, ಸ್ಪೇನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅವರ ವಿರುದ್ಧ ಹೊರಡಿಸಲಾದ ಲುಕ್ ಔಟ್ ನೋಟಿಸ್ ಪ್ರಕಾರ ಅವರನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ಕೋಲ್ಕತ್ತಾದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಮಾರ್ಚ್ 1ರಂದು ಶಿಕ್ಷಣ ಸಚಿವರು ಪಶ್ಚಿಮ ಬಂಗಾಳದ ಕಾಲೇಜು ಮತ್ತು ವಿಶ್ವವಿದ್ಯಾಲಯ ಪ್ರಾಧ್ಯಾಪಕರ ಸಂಘದ ಸಭೆಗಾಗಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗ, ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಬೇಕೆಂದು ಒತ್ತಾಯಿಸಿ ಎಸ್ಎಫ್ಐ ಮತ್ತು ಇತರ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿತ್ತು.
ಸಚಿವರು ಕ್ಯಾಂಪಸ್‌ನಿಂದ ಹೊರಡುತ್ತಿದ್ದಂತೆ, ಸುಮಾರು 100 ವಿದ್ಯಾರ್ಥಿಗಳು ಅವರ ಕಾರನ್ನು ಸುತ್ತುವರೆದರು. ಅವರ ಕಾರಿಗೆ ಹಾನಿಗೊಳಿಸಿದರು, ಅವರಿಗೆ ಶೂಗಳನ್ನು ತೋರಿಸಿದರು. ಕಾರಿನ ಟೈರ್‌ಗಳ ಗಾಳಿ ತೆಗೆದು, ಅವರಿಗೆ ಕಾರಿನಲ್ಲೇ ಇರುವಂತೆ ದಿಗ್ಬಂಧನ ಹಾಕಲಾಗಿತ್ತು. ಘಟನೆಯಲ್ಲಿ ಬಸು ಅವರ ಎಡಗೈಗೆ ಸಣ್ಣಪುಟ್ಟ ಗಾಯಗಳಾಗಿತ್ತು.
ಮಾರ್ಚ್ 1ರಂದು ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ಮಜುಂದಾರ್ ವಿರುದ್ಧ ಬಿಎನ್ಎಸ್ ಸೆಕ್ಷನ್ 126(2), 118(1), 324(2) ಸೇರಿದಂತೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಘಟನೆಯಲ್ಲಿ ಸ್ಪೇನ್‌ನ ಸಂಶೋಧನಾ ವಿದ್ಯಾರ್ಥಿ ಹಿಂದೋಲ್ ಮಜುಂದಾರ್ "ಪ್ರಮುಖ ಸಂಚುಕೋರ" ಎಂದು ಆರೋಪಿಸಿ ಕೋಲ್ಕತ್ತಾ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು.