×
Ad

ಉಚಿತ ಯುಪಿಐ ಉತ್ತಮ ಫಲಿತಾಂಶ ನೀಡಿದೆ, ಆದರೆ ಸೇವಾ ವೆಚ್ಚವನ್ನು ಭರಿಸಲೇಬೇಕು: ಆರ್‌ಬಿಐ ಗವರ್ನರ್

Update: 2025-07-26 17:06 IST

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ | PTI

ಹೊಸದಿಲ್ಲಿ: ದೊಡ್ಡ ವ್ಯಾಪಾರಿಗಳು ಯುಪಿಐ ಮೂಲಕ ನಡೆಸುವ ತ್ವರಿತ ವಹಿವಾಟುಗಳ ಮೇಲೆ ಭವಿಷ್ಯದಲ್ಲಿ ಶುಲ್ಕವನ್ನು ವಿಧಿಸಲಾಗುತ್ತದೆ ಎಂಬ ಬಗ್ಗೆ ನಡೆಯುತ್ತಿರುವ ಚರ್ಚೆಗಳ ನಡುವೆಯೇ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ಪಾವತಿ ವ್ಯವಸ್ಥೆಯು ಸುಸ್ಥಿರವಾಗಿರಬೇಕಾದರೆ ಸರಕಾರ ಅಥವಾ ಬಳಕೆದಾರರು ಅದರ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ತನ್ಮೂಲಕ ಉಚಿತ ಯುಪಿಐ ಪಾವತಿ ವ್ಯವಸ್ಥೆಯು ಶಾಶ್ವತವಲ್ಲ ಎಂಬ ಸುಳಿವು ನೀಡಿದ್ದಾರೆ.

ಶುಕ್ರವಾರ ಮುಂಬೈನಲ್ಲಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಬಿಎಫ್‌ಎಸ್‌ಐ ಶೃಂಗಸಭೆಯಲ್ಲಿ ಮಾತನಾಡಿದ ಮಲ್ಹೋತ್ರಾ,‌ ಯುಪಿಐ ಉಚಿತವಾಗಿರುವುದು ಉತ್ತಮ ಫಲಿತಾಂಶವನ್ನು ನೀಡಿದೆ ಮತ್ತು ವಹಿವಾಟುಗಳ ಸಂಖ್ಯೆಯಲ್ಲಿ ತ್ವರಿತ ಏರಿಕೆಗೆ ಕಾರಣವಾಗಿದೆ. ಆದಾಗ್ಯೂ ಯಾವುದೇ ಸೇವೆಯು ಸುಸ್ಥಿರವಾಗಿರಲು ಅದರ ವೆಚ್ಚವನ್ನು ಪೂರೈಸಬೇಕು ಎಂದು ಹೇಳಿದರು. ಆರ್‌ಬಿಐನ ಇತ್ತೀಚಿನ ದತ್ತಾಂಶಗಳಂತೆ ಜೂನ್‌ನಲ್ಲಿ 18.4 ಶತಕೋಟಿ ಯುಪಿಐ ವಹಿವಾಟುಗಳು ನಡೆದಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.32ರಷ್ಟು ಏರಿಕೆಯಾಗಿದೆ.

ಯುಪಿಐ ಒಂದು ಪ್ರಮುಖ ಮೂಲಸೌಕರ್ಯವಾಗಿದೆ. ಅದು ಉಚಿತವಾಗಿ ಲಭ್ಯವಾಗಬೇಕು ಎಂಬ ಅಭಿಪ್ರಾಯವನ್ನು ಹೊಂದಿರುವ ಸರಕಾರವು ಅದಕ್ಕೆ ಸಬ್ಸಿಡಿಯನ್ನು ಒದಗಿಸುತ್ತಿದೆ, ಇದು ಉತ್ತಮ ಫಲಿತಾಂಶಗಳನ್ನು ನೀಡಿದೆ ಎಂದು ಹೇಳಿದ ಮಲ್ಹೋತ್ರಾ, ಮುಖ್ಯ ವಿಷಯವೆಂದರೆ ಯುಪಿಐ ಅಥವಾ ಇತರ ಯಾವುದೇ ಪಾವತಿ ವ್ಯವಸ್ಥೆಯನ್ನು ಯಾರೇ ಆದರೂ ಬಳಸಬಹುದು, ಅದು ಅಗ್ಗ, ಸುರಕ್ಷಿತವಾಗಿದೆ ಮತ್ತು ಯಾರಾದರೂ ಅದರ ವೆಚ್ಚವನ್ನು ಭರಿಸಿದರೆ ಸುಸ್ಥಿರವಾಗಿ ಉಳಿಯುತ್ತದೆ. ಸರಕಾರ ಅಥವಾ ಬೇರೆ ಯಾರು ವೆಚ್ಚ ಪಾವತಿಸುತ್ತಾರೆ ಎನ್ನುವುದು ಅಷ್ಟೊಂದು ಮುಖ್ಯವಲ್ಲ, ಮುಖ್ಯವೆಂದರೆ ಯಾವುದೇ ಸೇವೆಯ ವೆಚ್ಚವು ಸಾಮೂಹಿಕವಾಗಿ ಅಥವಾ ಬಳಕೆದಾರರಿಂದ ಭರಿಸಲ್ಪಡಬೇಕು ಎಂದರು.

‘ಸದ್ಯಕ್ಕೆ ಯಾವುದೇ ಶುಲ್ಕಗಳಿಲ್ಲ ಮತ್ತು ಸರಕಾರವು ಈ ಸಂಪೂರ್ಣ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ವಿವಿಧ ಭಾಗೀದಾರರು ಮತ್ತು ಬ್ಯಾಂಕುಗಳಿಗೆ ಸಬ್ಸಿಡಿಯನ್ನು ಒದಗಿಸುತ್ತಿದೆ. ನಿಸ್ಸಂಶಯವಾಗಿ ಕೆಲವು ವೆಚ್ಚಗಳನ್ನು ಪಾವತಿಸಬೇಕಾಗುತ್ತದೆ, ಅವುಗಳನ್ನು ಭರಿಸಬೇಕಾಗುತ್ತದೆ. ಸದ್ಯಕ್ಕೆ ಸರಕಾರವು ಎಲ್ಲ ವೆಚ್ಚಗಳನ್ನು ಭರಿಸುತ್ತಿದೆ. ಮುಂದೆ ಆ ವೆಚ್ಚಗಳನ್ನು ಹೇಗೆ ಪೂರೈಸಲಾಗುತ್ತದೆ ಎನ್ನುವುದನ್ನು ಸರಕಾರವು ಪರಿಶೀಲಿಸಲಿದೆ ಎನ್ನುವುದು ನನಗೆ ಖಚಿತವಿದೆ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News