×
Ad

ದೇವರು ಗಲಭೆಗಳನ್ನು ನಡೆಸಲು ಅಥವಾ ಸುಳ್ಳುಗಳನ್ನು ಹರಡಲು ವ್ಯಕ್ತಿಗಳನ್ನು ಕಳಿಸುವುದಿಲ್ಲ : ಮಮತಾ ಬ್ಯಾನರ್ಜಿ ವ್ಯಂಗ್ಯ

Update: 2024-05-24 21:14 IST

ಮಮತಾ ಬ್ಯಾನರ್ಜಿ | PC : PTI

ಕೋಲ್ಕತ್ತಾ: “ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ದೇವರ ಪುತ್ರನೆಂದು ಕರೆದುಕೊಳ್ಳುತ್ತಿದ್ದಾರೆ. ನಮಗಿರುವಂತೆ ತನಗೆ ಯಾವುದೇ ಜೈವಿಕ ಪೋಷಕರಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಅವರು ತನ್ನನ್ನು ದೇವರೇ ಕಳಿಸಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ, ದೇವರು ಯಾರನ್ನಾದರೂ ಗಲಭೆ ಸೃಷ್ಟಿಸಲು ಅಥವಾ ಜಾಹೀರಾತುಗಳ ಮೂಲಕ ಸುಳ್ಳನ್ನು ಹರಡಲು ಅಥವಾ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಮೂಲಕ ಜನರನ್ನು ಜೈಲಿಗೆ ಹಾಕಲು ಕಳಿಸುತ್ತಾನೆಯೆ ಎಂದು ನಾನು ಕೇಳಲು ಬಯಸುತ್ತೇನೆ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ದಕ್ಷಿಣ 24 ಪರಗಣಗಳ ಜಿಲ್ಲೆಯ ಸುಂದರ್ ಬನ್ಸ್ ಪ್ರದೇಶದ ಮಥುರಾಪುರ್ ನಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, “ಅವರು ಖಚಿತ ಚುನಾವಣಾ ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಬಿಜೆಪಿಯ ನಾಯಕರು ಎಲ್ಲ ಬಗೆಯ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ, ಜಗನ್ನಾಥ ಸ್ವಾಮಿಯು ಪ್ರಧಾನಿ ಮೋದಿಯವರ ಭಕ್ತ ಎಂಬ ವಿವಾದಾತ್ಮಕ ಹೇಳಿಕೆ ನೀಡಿ, ನಂತರ ಕ್ಷಮೆ ಯಾಚಿಸಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರರನ್ನೂ ಮಮತಾ ಬ್ಯಾನರ್ಜಿ ಗೇಲಿ ಮಾಡಿದರು.

“ಒಂದು ವೇಳೆ ಬಿಜೆಪಿ ಕಾರ್ಯಕರ್ತರು ಹೇಳುವಂತೆ ಜಗನ್ನಾಥ ಸ್ವಾಮಿಯು ಮೋದಿಯವರ ಭಕ್ತನಾಗಿದ್ದರೆ, ನಾವು ಅವರ ಹೆಸರಿನಲ್ಲಿ ದೇವಾಲಯ ನಿರ್ಮಿಸುವುದಿಲ್ಲವೆ? ಅವರ ಚಿತ್ರಕ್ಕೆ ಪೂಜೆಗಳು ಹಾಗೂ ಪ್ರಸಾದಗಳನ್ನು ಅರ್ಪಿಸುವುದಿಲ್ಲವೆ ಹಾಗೂ ಅದಕ್ಕಾಗಿ ಓರ್ವ ಅರ್ಚಕನನ್ನು ನೇಮಿಸುವುದಿಲ್ಲವೆ? ನಾವು ಅದನ್ನೆಲ್ಲ ಮಾಡಬಲ್ಲೆವು. ಆದರೆ, ಅವರು ಇಂತಹ ವಿಷಯಗಳನ್ನು ಹೇಳುವ ಮೂಲಕ ರಾಜಕೀಯ ಮಾಡಬಾರದು” ಎಂದು ಅವರು ಕಟಕಿಯಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News