×
Ad

ಕೈಗೆಟುಕುತ್ತಿಲ್ಲ ಚಿನ್ನ; 1950 ರೂ.ಗಳ ಏರಿಕೆಯೊಂದಿಗೆ ದಾಖಲೆಯ ಎತ್ತರ ತಲುಪಿದ ಚಿನ್ನ

ಪ್ರತಿ 10 ಗ್ರಾಮ್‌ಗೆ 1,27,950 ರೂಪಾಯಿ

Update: 2025-10-13 20:54 IST

ಹೊಸದಿಲ್ಲಿ,ಅ.13: ಅಮೆರಿಕ ಮತ್ತು ಚೀನಾ ಮಧ್ಯೆ ಮರುಕಳಿಸಿರುವ ವ್ಯಾಪಾರ ಉದ್ವಿಗ್ನತೆಯ ನಡುವೆ ಸುರಕ್ಷಿತ ಹೂಡಿಕೆ ಮಾರ್ಗವಾಗಿ ಬೇಡಿಕೆಯು ಹೆಚ್ಚಿದ ಹಿನ್ನೆಲೆಯಲ್ಲಿ ಸೋಮವಾರ ದಿಲ್ಲಿಯಲ್ಲಿ ಚಿನ್ನದ ಬೆಲೆಯಲ್ಲಿ 1950 ರೂ.ಗಳ ಏರಿಕೆಯಾಗಿದ್ದು, ಪ್ರತಿ 10 ಗ್ರಾಮ್‌ಗೆ 1,27,950 ರೂ.ಗಳ ಹೊಸ ಎತ್ತರವನ್ನು ತಲುಪಿದೆ.

ಅಖಿಲ ಭಾರತ ಸರಾಫ ಸಂಘದ ಪ್ರಕಾರ,ಶೇ.99.9 ಶುದ್ಧತೆಯ ಚಿನ್ನ ಶುಕ್ರವಾರ ಪ್ರತಿ 10 ಗ್ರಾಮ್‌ಗೆ 1,26,000 ರೂ.ಗಳಲ್ಲಿ ಮುಕ್ತಾಯಗೊಂಡಿತ್ತು.

ಇದರ ಜೊತಗೆ ಶೇ.99.5ರಷ್ಟು ಶುದ್ಧತೆಯ ಚಿನ್ನದ ಬೆಲೆಯಲ್ಲಿಯೂ 1,950 ರೂ.ಗಳ ಏರಿಕೆಯಾಗಿದ್ದು,ಪ್ರತಿ 10 ಗ್ರಾಮ್‌ಗೆ 1,27,350 ರೂ.ಗೆ (ಎಲ್ಲ ತೆರಿಗೆಗಳು ಸೇರಿ) ತಲುಪುವುದರೊಂದಿಗೆ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ. ಶುಕ್ರವಾರ ಅದು ಪ್ರತಿ 10 ಗ್ರಾಮ್‌ಗೆ 1,25,400 ರೂ.ಗಳಲ್ಲಿ ಮುಕ್ತಾಯಗೊಂಡಿತ್ತು.

ಅಮೆರಿಕದಿಂದ ಆಯ್ದ ಚೀನಿ ಉತ್ಪನ್ನಗಳ ಮೇಲೆ ಶೇ.100ರಷ್ಟು ಸುಂಕದ ಘೋಷಣೆ ಮತ್ತು ಅಪರೂಪದ ಖನಿಜಗಳ ರಫ್ತುಗಳನ್ನು ನಿರ್ಬಂಧಿಸುವ ಚೀನಾದ ಬೆದರಿಕೆಯು ಜಾಗತಿಕ ಅನಿಶ್ಚಿತತೆಯನ್ನು ಮತ್ತು ಅಪಾಯ ನಿವಾರಣೆ ಕಳವಳಗಳನ್ನು ಹೆಚ್ಚಿಸಿದೆ.

ಈ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಸುರಕ್ಷತೆಯನ್ನು ಬಯಸುವ ಹೂಡಿಕೆದಾರರಿಂದ ನಿರಂತರ ಬೇಡಿಕೆಯು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಎಲ್‌ಕೆಪಿ ಸೆಕ್ಯೂರಿಟಿಸ್‌ನ ಜತಿನ್ ತ್ರಿವೇದಿ ಅಭಿಪ್ರಾಯಿಸಿದ್ದಾರೆ.

ಸೋಮವಾರ ಬೆಳ್ಳಿಯ ಬೆಲೆಗಳೂ ಬಲವಾದ ಏರಿಕೆಯನ್ನು ಕಂಡಿವೆ. ಅದು ಪ್ರತಿ ಕೆಜಿಗೆ 7,500 ರೂ,ಗಳ ಏರಿಕೆಯೊಂದಿಗೆ 1,79,000 ರೂ.ಗಳ ದಾಖಲೆಯ ಮಟ್ಟವನ್ನು ತಲುಪಿದೆ. ಶುಕ್ರವಾರ ಬೆಳ್ಳಿ ಪ್ರತಿ ಕೆಜಿಗೆ 1,71,500 ರೂ.ಗಳಲ್ಲಿ ಮುಕ್ತಾಯಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News