ನಿಷ್ಕ್ರಿಯ ಜನ್ ಧನ್ ಖಾತೆಗಳನ್ನು ಮುಚ್ಚುವಂತೆ ಬ್ಯಾಂಕುಗಳಿಗೆ ಸರಕಾರದ ಸೂಚನೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಪಿಎಂ ಜನ್ ಧನ್ ಯೋಜನೆ(ಪಿಎಂಜೆಡಿವೈ) ಯಡಿ ಆರಂಭಿಸಲಾಗಿದ್ದು, ಈಗ ನಿಷ್ಕ್ರಿಯಗೊಂಡಿರುವ ಖಾತೆಗಳನ್ನು ಮುಚ್ಚುವಂತೆ ಕೇಂದ್ರವು ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸೂಚಿಸಿದೆ. ಈ ಖಾತೆಗಳು ವಂಚನೆಯಿಂದ ಗಳಿಸಿದ ಹಣದ ಅಕ್ರಮ ವರ್ಗಾವಣೆಗಾಗಿ ದುರ್ಬಳಕೆಯಾಗುತ್ತಿರುವ ನಿದರ್ಶನಗಳು ಹೆಚ್ಚುತ್ತಿರುವ ನಡುವೆ ಸರಕಾರವು ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ಬೆಳವಣಿಗೆಯನ್ನು ಬಲ್ಲ ಮೂಲಗಳು ತಿಳಿಸಿವೆ ಎಂದು business-standard.com ವರದಿ ಮಾಡಿದೆ.
ಜನ್ ಧನ್ ಖಾತೆಗಳು ಬಳಕೆಯಾಗುತ್ತಿಲ್ಲವಾದರೆ ಅವುಗಳ ದುರುಪಯೋಗವಾಗಬಹುದು,ಹೀಗಾಗಿ ಅಂತಹ ಖಾತೆಗಳನ್ನು ಮುಚ್ಚಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಈ ಮೂಲಗಳು ತಿಳಿಸಿವೆ.
ಈ ನಡುವೆ ಬ್ಯಾಂಕುಗಳು ನಿಷ್ಕ್ರಿಯ ಖಾತೆಗಳನ್ನು ಪುನಃ ಸಕ್ರಿಯಗೊಳಿಸಲು ಮರು-ಕೆವೈಸಿ ಪ್ರಕ್ರಿಯೆಯನ್ನು ಆರಂಭಿಸಿವೆ. ಆದಾಗ್ಯೂ ಫಲಾನುಭವಿಗಳು ಖಾತೆಗಳನ್ನು ಸಕ್ರಿಯವಾಗಿಡಲು ಬಯಸದಿದ್ದರೆ ಅಂತಹ ಖಾತೆಗಳನ್ನು ಮುಚ್ಚಲಾಗುತ್ತಿದೆ.
ಯಾವುದೇ ಬ್ಯಾಂಕ್ ಖಾತೆಯಲ್ಲಿ ನಿರಂತರವಾಗಿ 24 ತಿಂಗಳುಗಳ ಕಾಲ ಯಾವುದೇ ವಹಿವಾಟು ನಡೆದಿರದಿದ್ದರೆ ಅದನ್ನು ನಿಷ್ಕ್ರಿಯ ಖಾತೆ ಎಂದು ವರ್ಗೀಕರಿಸಲಾಗುತ್ತದೆ.
ಸರಕಾರಿ ಸ್ವಾಮ್ಯದ ಬ್ಯಾಂಕೊಂದರ ಹಿರಿಯ ಅಧಿಕಾರಿಯೋರ್ವರ ಪ್ರಕಾರ ನಿಷ್ಕ್ರಿಯಗೊಂಡಿರುವ ಹೆಚ್ಚಿನ ಜನ್ ಧನ್ ಖಾತೆಗಳು ಗ್ರಾಮೀಣ ಗ್ರಾಹಕರಿಗೆ ಸೇರಿದ್ದಾಗಿವೆ.
ಸೈಬರ್ ವಂಚಕರು ಅಪರಾಧದ ಹಣದ ವರ್ಗಾವಣೆಗೆ ನಿಷ್ಕ್ರಿಯ ಖಾತೆಗಳನ್ನು ಬಳಸಿಕೊಳ್ಳುತ್ತಿದ್ದು, ಇಂತಹ ಖಾತೆಗಳನ್ನು ಪತ್ತೆ ಹಚ್ಚಲು ಮತ್ತು ಅವುಗಳ ಮೆಲೆ ನಿಗಾಯಿರಿಸಲು ಆರ್‌ಬಿಐ ಉಪಕ್ರಮವನ್ನು ಆರಂಭಿಸಿದೆ.
ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯ ಭಾಗವಾಗಿ ಹೆಚ್ಚಿನ ಖಾತೆಗಳು ಹೆಚ್ಚಿನ ಲಾಭವನ್ನು ನೀಡುತ್ತವೆ ಎಂಬ ತಪ್ಪು ಕಲ್ಪನೆಯಿಂದ ಫಲಾನುಭವಿಗಳು ಹಲವಾರು ಖಾತೆಗಳನ್ನು ತೆರೆದಿದ್ದರು. ಈ ಪೈಕಿ ಹೆಚ್ಚಿನ ಖಾತೆಗಳನ್ನು 2014-15ರಲ್ಲಿ ತೆರೆಯಲಾಗಿತ್ತು. ಈಗ ಡಿಬಿಟಿ ಸ್ಥಿರಗೊಂಡಿದ್ದು,ಯಾವ ಖಾತೆಗಳು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ ಎಂಬ ಸ್ಪಷ್ಟ ಮೌಲ್ಯಮಾಪನ ಲಭಿಸುತ್ತಿದೆ. ಇತರ ಖಾತೆಗಳು ನಿಷ್ಕ್ರಿಯಗೊಂಡಿದ್ದು ಸೈಬರ್ ವಂಚನೆ ಅಥವಾ ಅಕ್ರಮ ಹಣ ವರ್ಗಾವಣೆಯಂತಹ ಅಪಾಯಗಳಿಗೆ ಒಡ್ಡಿಕೊಂಡಿವೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಹಿರಿಯ ಎಸ್‌ಬಿಐ ಅಧಿಕಾರಿಯೋರ್ವರು ತಿಳಿಸಿದರು.
2025,ಜೂ.25ಕ್ಕೆ ಇದ್ದಂತೆ ಪಿಎಂಜೆಡಿವೈ ಅಡಿ ಒಟ್ಟು 55.7 ಕೋಟಿ ಜನಧನ ಖಾತೆಗಳಿದ್ದು,ಇವುಗಳಲ್ಲಿ ಒಟ್ಟು 2.60 ಲಕ್ಷ ಕೋಟಿ ರೂ.ಗಳ ಠೇವಣಿಯಿದೆ. 55.7 ಕೋಟಿ ಖಾತೆಗಳ ಪೈಕಿ 31.06 ಕೋಟಿ ಖಾತೆಗಳು ಮಹಿಳೆಯರಿಗೆ ಸೇರಿವೆ. 37 ಕೋಟಿಗೂ ಅಧಿಕ ಖಾತೆಗಳು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿಯ ಬ್ಯಾಂಕ್ ಶಾಖೆಗಳಲ್ಲಿದ್ದರೆ,ನಗರ ಪ್ರದೇಶಗಳಲ್ಲಿ 18.53 ಕೋಟಿ ಖಾತೆಗಳಿವೆ.