ಗುಜರಾತ್ | ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೂಪದರ್ಶಿ ಅಂಜಲಿ ವರ್ಮೋರಾ
ಸೂರತ್: ಗುಜರಾತ್‌ನ ಸೂರತ್‌ನಲ್ಲಿ ರೂಪದರ್ಶಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವತಿಯನ್ನು ಅಂಜಲಿ ಅಲ್ಪೇಶ್ ವರ್ಮೋರಾ ಎಂದು ಗುರುತಿಸಲಾಗಿದೆ. ಆಕೆ ಕಳೆದ ಹಲವು ವರ್ಷಗಳಿಂದ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
ಈ ಕುರಿತು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸೂರತ್ ಉಪ ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಗುರ್ಜಾರ್, ಕಳೆದ ಹಲವು ವರ್ಷಗಳಿಂದ ಅಂಜಲಿ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಇದರೊಂದಿಗೆ ಫ್ಯಾಷನ್ ಶೋಗಳಲ್ಲಿಯೂ ಅವರು ಭಾಗಿಯಾಗುತ್ತಿದ್ದರು. ಅಂಜಲಿ ಇತ್ತೀಚೆಗಷ್ಟೆ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಘಟನೆಗೂ ಮುನ್ನ ಆಕೆ ತನ್ನ ಭಾವಿ ಪತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು ಎಂದು ತಿಳಿಸಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಅಂಜಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಹಿಂದಿರುಗಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.