×
Ad

ಜ್ಞಾನವಾಪಿ ಪ್ರಕರಣ: ಎಎಸ್ ಐ ಸಮೀಕ್ಷೆ ಪ್ರಶ್ನಿಸಿದ್ದ ಮಸೀದಿ ಸಮಿತಿಯ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

Update: 2023-08-03 10:56 IST

ಲಕ್ನೊ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಸಮೀಕ್ಷೆ ವಿರೋಧಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

“ನ್ಯಾಯದ ಹಿತಾಸಕ್ತಿಯಿಂದ ವೈಜ್ಞಾನಿಕ ಸಮೀಕ್ಷೆ ಅಗತ್ಯವಾಗಿದೆ, ”ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದು ಕಾನೂನು ವೆಬ್ಸೈಟ್ ಲೈವ್ ಲಾ ವರದಿ ಮಾಡಿದೆ.

ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತನ್ನ ಸಮೀಕ್ಷೆಯನ್ನು ಮುಂದುವರಿಸಲಿದೆ ಎಂದು ಅಲಹಾಬಾದ್ ಹೈಕೋರ್ಟ್ ಇಂದು ತೀರ್ಪು ನೀಡಿದೆ. ವಾರಣಾಸಿಯ ಐತಿಹಾಸಿಕ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿಯ ಸಮೀಕ್ಷೆಯನ್ನು ಮಸೀದಿ ಸಮಿತಿಯು ಪ್ರಶ್ನಿಸಿತ್ತು.

"ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್‌ಐ ಸಮೀಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿಯುತ್ತದೆ" ಎಂದು ಜ್ಞಾನವಾಪಿ ಸಮೀಕ್ಷೆ ಪ್ರಕರಣದಲ್ಲಿ ಹಿಂದೂ ಪರವಾಗಿ ವಿಷ್ಣು ಶಂಕರ್ ಜೈನ್ ಸುದ್ದಿಗಾರರಿಗೆ ತಿಳಿಸಿದರು.

ಮುಖ್ಯ ನ್ಯಾಯಮೂರ್ತಿ ಪ್ರಿಟಿಂಕರ್ ದಿವಾಕರ್ ಅವರು ಆದೇಶವನ್ನು ಕಾಯ್ದಿರಿಸಿದ ಒಂದು ವಾರದ ನಂತರ ಈ ಬೆಳವಣಿಗೆ ನಡೆದಿದೆ, ನ್ಯಾಯಾಲಯದ ಆದೇಶ ಹೊರಬೀಳುವವರೆಗೆ ಸಮೀಕ್ಷೆ ನಡೆಯುವುದಿಲ್ಲ ಎಂದು ಅವರು ಹೇಳಿದ್ದರು.

ವಝುಖಾನಾ ಪ್ರದೇಶವನ್ನು ಹೊರತುಪಡಿಸಿ,ಮಸೀದಿ ಸಂಕೀರ್ಣದ ಎಎಸ್ಐ ಸಮೀಕ್ಷೆಗೆ ಅನುಮತಿ ನೀಡಿದ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಮಸೀದಿ ಸಮಿತಿಯು ಪ್ರಶ್ನಿಸಿತ್ತು. ಜುಲೈ 21 ರಂದು ವಾರಣಾಸಿ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಮೇ 16, 2023 ರಂದು ನಾಲ್ಕು ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಯ ಮೇರೆಗೆ ಜ್ಞಾನವಾಪಿ ಸಂಕೀರ್ಣದ ಎಎಸ್ಐ ಸಮೀಕ್ಷೆಗೆ ಆದೇಶಿಸಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News