"ಎಪ್ಸ್ಟೀನ್ ನೊಂದಿಗೆ ಹರ್ದೀಪ್ ಸಿಂಗ್ ಪುರಿ ಸಲಹೆ ಕೇಳಿದ್ದೇಕೆ?": 6 ಪ್ರಶ್ನೆಗಳೊಂದಿಗೆ ವಾಗ್ದಾಳಿ ನಡೆಸಿದ ಕಾಂಗ್ರೆಸ್
ಹರ್ದೀಪ್ ಸಿಂಗ್ ಪುರಿ ,ಪವನ್ ಖೇರಾ | Photo Credit : PTI
ಹೊಸದಿಲ್ಲಿ: ಜೆಫ್ರಿ ಎಪ್ಸ್ಟೀನ್ ನೊಂದಿಗೆ ತಮ್ಮ ಸಂಪರ್ಕಗಳ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನೀಡಿದ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ತೀವ್ರ ವಾಗ್ದಾಳಿ ನಡೆಸಿದೆ. ಪಕ್ಷದ ನಾಯಕ ಪವನ್ ಖೇರಾ ಅವರು ಆರು ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದು, ಸಚಿವ ಹರ್ದೀಪ್ ಸಿಂಗ್ ಪುರಿ ಎಪ್ಸ್ಟೀನ್ ಅವರ ಅಪರಾಧಗಳ ಗಂಭೀರತೆಯನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪ್ರತಿಕ್ರಿಯೆ ನೀಡಿದ ಪುರಿ, ಕಳೆದ ಎಂಟು ವರ್ಷಗಳಲ್ಲಿ ಎಪ್ಸ್ಟೀನ್ ನನ್ನು ಮೂರು ಅಥವಾ ನಾಲ್ಕು ಬಾರಿ ಮಾತ್ರ ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ. ಮೂರು ಮಿಲಿಯನ್ ಇಮೇಲ್‌ಗಳು ಬಿಡುಗಡೆಯಾದ ನಂತರ ಅದರ ವಿವರಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿವೆ ಎಂದು ಅವರು ಹೇಳಿದ ಬಳಿಕ ವಿವಾದ ಮತ್ತಷ್ಟು ಉಲ್ಬಣಗೊಂಡಿದೆ.
ಪವನ್ ಖೇರಾ ಅವರು, 2014ರ ಅಕ್ಟೋಬರ್ 4ರಂದು ನಡೆದ ಇಮೇಲ್ ವಿನಿಮಯಗಳನ್ನು ಉಲ್ಲೇಖಿಸಿದ್ದಾರೆ. ಇದು ಅಮೆರಿಕದ ನ್ಯಾಯ ಇಲಾಖೆಯು ಬಿಡುಗಡೆ ಮಾಡಿದ ಎಪ್ಸ್ಟೀನ್ ಫೈಲ್ ನ ಭಾಗವಾಗಿದೆ. ಅದನ್ನು ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಅವರು, “ಪುರಿ ತಮ್ಮ ‘ಸಂಪರ್ಕಗಳು’ ಅವರನ್ನು ರೀಡ್ ಹಾಫ್‌ಮನ್‌ಗೆ ಪರಿಚಯಿಸಿವೆ ಎಂದು ಹೇಳುತ್ತಾರೆ. ಆದರೆ ಅವರು ಹೇಳದಿರುವುದು ಇನ್ನಷ್ಟು ಮುಖ್ಯ. ಅಕ್ಟೋಬರ್ 4, 2014ರಂದು ಎಪ್ಸ್ಟೀನ್, ಪುರಿಗೆ ‘ರೀಡ್ ಅವರನ್ನು ಭೇಟಿಯಾಗಿದ್ದೀರಾ?’ ಎಂದು ಇಮೇಲ್ ಮಾಡಿದರು. ಕೆಲವೇ ಗಂಟೆಗಳಲ್ಲಿ ಪುರಿ ಉತ್ತರಿಸಿ, ‘ನಾನು ಇಂದು ಮಧ್ಯಾಹ್ನದ ಸಭೆಗೆ SFನಲ್ಲಿದ್ದೇನೆ. ನನ್ನ ಸ್ನೇಹಿತ, ನೀವು. ಯಾವುದೇ ವಿಷಯಗಳನ್ನೂ ಸಾಧ್ಯವಾಗುವಂತೆ ಮಾಡಬಲ್ಲವರು. ಏನಾದರೂ ಸಲಹೆ ನೀಡುತ್ತೀರಾ?’ ಎಂದು ಕೇಳಿದ್ದರು. ಇದಕ್ಕೆ ಎಪ್ಸ್ಟೀನ್, ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿಗಳನ್ನು ಭೇಟಿ ಮಾಡಿಸಲು ಅವರಿಗೆ ಭಾರತ ಪ್ರವಾಸವನ್ನು ಆಯೋಜಿಸುತ್ತೀರಿ ಎಂದು ಹೇಳಿ’ ಎಂದು ಸಲಹೆ ನೀಡಿ ಪ್ರತಿಕ್ರಿಯಿಸಿದರು” ಎಂದು ಬರೆದಿದ್ದಾರೆ.
ಈ ಇಮೇಲ್ ನ ಹಿನ್ನೆಲೆಯಲ್ಲಿ ಪವನ್ ಖೇರಾ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಆರು ಪ್ರಶ್ನೆಗಳನ್ನು ಕೇಳಿದ್ದಾರೆ.
1. ರೀಡ್ ಹಾಫ್‌ಮನ್ ಭೇಟಿಯ ಬಗ್ಗೆ ಅದು ನಡೆಯುವ ಮುನ್ನವೇ ಎಪ್ಸ್ಟೀನ್ ಗೆ ಅದು ಹೇಗೆ ತಿಳಿದಿತ್ತು?
2. ಆ ಭೇಟಿಯನ್ನು ಏರ್ಪಡಿಸಿದ ‘ಸಂಪರ್ಕ’ ಎಪ್ಸ್ಟೀನ್ ಆಗಿದ್ದನೇ?
3. ಸಭೆಯ ವಿವರಗಳನ್ನು ಹರ್ದೀಪ್ ಎಪ್ಸ್ಟೀನ್ ಜೊತೆ ಏಕೆ ಚರ್ಚಿಸುತ್ತಿದ್ದರು?
4. ಎಪ್ಸ್ಟೀನ್ ನನ್ನು ‘ಸ್ನೇಹಿತ’ ಎಂದು ಏಕೆ ಕರೆಯಲಾಗುತ್ತಿತ್ತು?
5. ಎಪ್ಸ್ಟೀನ್ ಹರ್ದೀಪ್ ಪುರಿಗೆ ಏನನ್ನು ಸಾಧ್ಯವಾಗಿಸುತ್ತಿದ್ದ?
6. ಸಂಬಂಧ ಆಕಸ್ಮಿಕವಾಗಿದ್ದರೆ ಹರ್ದೀಪ್ ಸಿಂಗ್ ಅವರು ಎಪ್ಸ್ಟೀನ್ ‘ಸಲಹೆ’ ಪಡೆಯಲು ಏಕೆ ಪ್ರಯತ್ನಿಸಿದರು?
ಪವನ್ ಖೇರಾ ಅವರು ಈ ಪೋಸ್ಟ್ ನ ಶೀರ್ಷಿಕೆಯಲ್ಲಿ, “ಪುರಿ ತಮ್ಮ ಹಿಡಿತ ಕಳೆದುಕೊಂಡಂತೆ ಕಾಣುತ್ತಾರೆ. ಒಮ್ಮೆ ಭಾರತವನ್ನು ರಾಜತಾಂತ್ರಿಕನಾಗಿ ಪ್ರತಿನಿಧಿಸಿದ್ದ ಅದೇ ವ್ಯಕ್ತಿ ಇವರೇನಾ ಎಂಬುದು ನಂಬಲು ಕಷ್ಟ. ಒಂದು ರೀತಿಯ ನಾಟಕೀಯತೆ ಕಂಡುಬರುತ್ತಿದೆ” ಎಂದು ಟೀಕಿಸಿದ್ದಾರೆ.
ಇನ್ನೊಂದು ಪೋಸ್ಟ್‌ನಲ್ಲಿ ಅವರು, ಹರ್ದೀಪ್ ಸಿಂಗ್ ಪುರಿ ಎಪ್ಸ್ಟೀನ್ ನ ಶಿಕ್ಷೆಯನ್ನು ಕ್ಷುಲ್ಲಕ ಎಂಬಂತೆ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ. “2008ರಲ್ಲಿ ಎಪ್ಸ್ಟೀನ್ ‘ಅಪ್ರಾಪ್ತ ವಯಸ್ಸಿನ ಮಹಿಳೆಯ ಪರವಾಗಿ ದಯೆ ತೋರಿ’ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳುವುದು ಸಾಕೇ? ‘ಅಪ್ರಾಪ್ತ ವಯಸ್ಸಿನ ಮಹಿಳೆ’ ಅಂದರೆ ಅಪ್ರಾಪ್ತ ವಯಸ್ಕರು; ಮೂಲತಃ ಮಗು. ಮಗುವಿನ ಲೈಂಗಿಕ ಶೋಷಣೆಯನ್ನು ಇಷ್ಟು ಸಣ್ಣದಾಗಿ ತೋರಿಸಬಹುದೇ? ಎಪ್ಸ್ಟೀನ್ ಫ್ಲೋರಿಡಾ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡು ಶಿಕ್ಷೆ ಅನುಭವಿಸಿದ್ದಾನೆ. ಆದರೂ ‘ಅನೇಕರಿಗೆ ಅನುಮಾನಗಳಿವೆ’ ಎಂದು ಹೇಳುವುದು ಯಾವ ಅರ್ಥದಲ್ಲಿ?” ಎಂದು ಪ್ರಶ್ನಿಸಿದ್ದಾರೆ.
ಪವನ್ ಖೇರಾ ಅವರು ಹರ್ದೀಪ್ ಸಿಂಗ್ ಪುರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿ, “ಎಪ್ಸ್ಟೀನ್ ಅಪರಾಧವನ್ನು ದೃಢೀಕರಿಸಲು ದೇವರು ಸ್ವರ್ಗದಿಂದ ಇಳಿದು ಬರಬೇಕೇ? ಕೇಂದ್ರ ಸಚಿವರೊಬ್ಬರು ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ಅಪರಾಧಗಳ ಬಗ್ಗೆ ಇಷ್ಟು ನಿರ್ಲಿಪ್ತವಾಗಿ ಮಾತನಾಡುವುದು ಬೇಸರದ ಸಂಗತಿ. ಸಾರ್ವಜನಿಕ ಹುದ್ದೆ ನೈತಿಕ ಸ್ಪಷ್ಟತೆಯನ್ನು ಬಯಸುತ್ತದೆ, ದೌರ್ಜನ್ಯವನ್ನು ಕಡಿಮೆ ಮಾಡುವುದಲ್ಲ” ಎಂದು ಟೀಕಿಸಿದ್ದಾರೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹರ್ದೀಪ್ ಸಿಂಗ್ ಪುರಿ, ರಾಹುಲ್ ಗಾಂಧಿ “ಆಧಾರರಹಿತ ಆರೋಪಗಳನ್ನು” ಮಾಡುತ್ತಿದ್ದಾರೆ ಎಂದು ಆರೋಪಿಸಿ, ಸಂಸತ್ತಿನಲ್ಲಿ ಅವರ ಹೇಳಿಕೆಗಳಿಗೆ “ಅವಮಾನ ಮಾಡುವ” ಉದ್ದೇಶ ಹೊಂದಿರುವಂತೆ ಇದೆ ಎಂದು ಹೇಳಿದ್ದರು.
ಎಪ್ಸ್ಟೀನ್ ಫೈಲ್ಸ್ ವಿಚಾರವಾಗಿ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದ ಹರ್ದೀಪ್ ಸಿಂಗ್ ಪುರಿ, “ಎಂಟು ವರ್ಷಗಳಲ್ಲಿ ಬಹುಶಃ ಮೂರು ಅಥವಾ ನಾಲ್ಕು ಭೇಟಿ ಮಾಡಿದ್ದರ ಉಲ್ಲೇಖಗಳಿವೆ. ಅವನೊಂದಿಗೆ ನನಗೆ ಇದ್ದ ಯಾವುದೇ ಸಂಪರ್ಕವೂ ಸಂತ್ರಸ್ತರು ಆರೋಪಿಸಿದ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಸಂಬಂಧಪಟ್ಟದ್ದಲ್ಲ. ನನ್ನ ಸಂವಹನಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ತಿಳಿಸಿದ್ದರು.
ಈ ಭೇಟಿಗಳು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿಯೂ ಹಾಗೂ ನಂತರ ಅಂತರರಾಷ್ಟ್ರೀಯ ಶಾಂತಿ ಸಂಸ್ಥೆಯೊಂದಿಗಿನ ತಮ್ಮ ಕಾರ್ಯಗಳಲ್ಲಿಯೂ ನಡೆದವು ಎಂದು ಅವರು ವಿವರಿಸಿದ್ದರು.
ಲೋಕಸಭೆಯಲ್ಲಿ ಮಾತನಾಡುವ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ “ಮಾಹಿತಿಯನ್ನು ಪರಿಶೀಲಿಸಿದ್ದೇನೆ” ಎಂದು ಹೇಳಿ, “ಎಪ್ಸ್ಟೀನ್ ಹರ್ದೀಪ್ ಪುರಿಯನ್ನು ಹೆಸರಿಸಿರುವ ವಿಚಾರವು ಅಮೆರಿಕದ ನ್ಯಾಯಾಂಗ ಇಲಾಖೆಯ ಫೈಲ್ ನಲ್ಲಿವೆ” ಎಂದು ಆರೋಪಿಸಿದ ನಂತರ ಈ ವಿವಾದ ಆರಂಭವಾಗಿದೆ. ಈ ಮಾತಿನ ಚಕಮಕಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಘರ್ಷಣೆಗೆ ಕಾರಣವಾಗಿದೆ.