×
Ad

ರಫೇಲ್ ಯುದ್ಧ ವಿಮಾನ ಹಾರಿಸಿದ ಮೊದಲ ಭಾರತೀಯ ಹಿಲಾಲ್ ಅಹ್ಮದ್

Update: 2025-05-08 00:09 IST

ಹೊಸದಿಲ್ಲಿ: ಭಾರತೀಯ ವಾಯುಪಡೆಯ ಏರ್ ವೈಸ್ ಚೀಫ್ ಮಾರ್ಷಲ್ ಹಿಲಾಲ್ ಅಹ್ಮದ್ ರಫೇಲ್ ಯುದ್ಧ ವಿಮಾನ ಹಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಬೆಳಗಿನ ಜಾವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗುತಾಣಗಳ ಮೆಲೆ ನಡೆಸಿದ ಆಪರೇಷನ್ ಸಿಂಧೂರ್ ನಲ್ಲಿ ರಫೇಲ್ ಯುದ್ಧ ವಿಮಾನಗಳು ಪ್ರಮುಖ ಪಾತ್ರ ವಹಿಸಿವೆ ಎಂದು Mathrubhumi ವರದಿ ಮಾಡಿದೆ.

ಕಾಶ್ಮೀರದ ಅನಂತನಾಗ್‌ ಮೂಲದವರಾದ ಏರ್ ಕಮೋಡೋರ್, ಏರ್ ವೈಸ್ ಚೀಫ್ ಮಾರ್ಷಲ್ ಹಿಲಾಲ್ ಅಹ್ಮದ್ ಫ್ರಾನ್ಸ್‌ಗೆ ಭಾರತದ ಏರ್ ಅಟ್ಯಾಚ್ ಆಗಿದ್ದರು. ಜುಲೈ 27, 2020 ರಂದು ಫ್ರಾನ್ಸ್‌ನಿಂದ ಭಾರತಕ್ಕೆ ಬಂದ ರಫೇಲ್ ಜೆಟ್‌ಗಳನ್ನು ನಿರ್ವಹಿಸಿದ ಮೊದಲ ಭಾರತೀಯ ʼಪೈಲೆಟ್ʼ ಹಿಲಾಲ್ ಅಹ್ಮದ್ ಎನಿಸಿಕೊಂಡಿದ್ದಾರೆ. ರಫೇಲ್‌ ಜೆಟ್ಗಳ ಆರಂಭದ ಪಯಣದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ದೇಶದ ಕಾರ್ಯಾಚರಣೆಯ ಅಗತ್ಯಗಳಿಗೆ ಅನುಗುಣವಾಗಿ ರಫೇಲ್ ಜೆಟ್ ಗಳನ್ನು ಮಾರ್ಪಾಟು ಮಾಡುವಲ್ಲಿ ಅವರು ನಿಕಟವಾಗಿ ಮೇಲ್ವಿಚಾರಣೆ ಮಾಡಿದ್ದರು ಎನ್ನಲಾಗಿದೆ.

3,000 ಗಂಟೆಗಳಿಗೂ ಹೆಚ್ಚು ಅಪಘಾತ ರಹಿತ ಹಾರಾಟದ ಅನುಭವ ಹೊಂದಿರುವ ಹಿಲಾಲ್ ಅಹ್ಮದ್ ಮಿರಾಜ್ 2000 ಮತ್ತು ಮಿಗ್-21 ನಂತಹ ಮುಂಚೂಣಿಯ ಯುದ್ಧ ವಿಮಾನಗಳಲ್ಲೂ ಹಾರಾಟ ನಡೆಸಿದ್ದಾರೆ.

ರಫೇಲ್ ಯುದ್ಧ ವಿಮಾನದಲ್ಲಿನ ʼನಿರ್ವಹಣೆʼಗೆ ಹೆಚ್ಚು ನೆನಪಿನಲ್ಲಿ ಉಳಿಯುವ ಹಿಲಾಲ್ ಅಹ್ಮದ್, ತಮ್ಮ ನಾಯಕತ್ವದ ಮೂಲಕ ಭಾರತೀಯ ವಾಯುಪಡೆಯನ್ನು ಆಧುನೀಕರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಭಾರತೀಯ ವಾಯುಸೇನೆಯ ಅಗತ್ಯಕ್ಕೆ ತಕ್ಕಂತೆ ರಫೇಲ್ ವಿನ್ಯಾಸವನ್ನು ಬದಲಿಸುವ ಮೂಲಕ ಕಠಿಣ ಸವಾಲುಗಳನ್ನು ಎದುರಿಸಲು ಅದನ್ನು ಸಿದ್ಧಗೊಳಿಸಿದ್ದಾರೆ.

ಆಪರೇಷನ್ ಸಿಂಧೂರ್‌ ವೈಮಾನಿಕ ದಾಳಿಯನ್ನು ಕಾರ್ಯಗತಗೊಳಿಸುವಿಕೆಯಲ್ಲಿ ಅವರ ಹೆಸರು ನೇರವಾಗಿ ಎಲ್ಲೂ ಮುನ್ನೆಲೆಗೆ ಬಂದಿಲ್ಲ. ಆದರೆ, ವೈಮಾನಿಕ ದಾಳಿ ಮತ್ತು ಕಾರ್ಯತಂತ್ರದ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಹಿಲಾಲ್ ಅಹ್ಮದ್ ಅವರ ಆಳವಾದ ಜ್ಞಾನವು ನಿಖರ ಯುದ್ಧ ತಂತ್ರಕ್ಕೆ ಸೇನೆಗೆ ಸಹಾಕಾರಿಯಾಗುತ್ತದೆ ಎಂದು ರಕ್ಷಣಾ ವಲಯದ ವಿಶ್ಲೇಷಕರು ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News