ಹಿಂದಿ ಹೇರಿಕೆಯು 25 ಪ್ರಾದೇಶಿಕ ಭಾಷೆಗಳನ್ನು ಅಳಿಸಿಹಾಕಿದೆ: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಆರೋಪ
Photo : PTI
ಚೆನ್ನೈ: ಕೇಂದ್ರದ ಹಿಂದಿ ಹೇರಿಕೆಯ ಆರೋಪದ ವಿರುದ್ಧ ಗುರುವಾರ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜ್ಯದಲ್ಲಿ ಭಾಷೆಯ ಹೇರಿಕೆಗೆ ಅನುಮತಿ ನೀಡುವುದಿಲ್ಲ ಎಂದು ಮತ್ತೊಮ್ಮೆ ಹೇಳಿದ್ದಾರೆ.
ತಮಿಳು ಮತ್ತು ಅದರ ಸಂಸ್ಕೃತಿಯನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿರುವ ಅವರು, "ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ. ಹಿಂದಿಯು ಮುಖವಾಡ, ಸಂಸ್ಕೃತವು ಅದರ ಹಿಂದಿನ ಗುಪ್ತ ಮುಖ" ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಆಡಳಿತರೂಢ ಡಿಎಂಕೆಯು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಭಾಗವಾಗಿ ಕೇಂದ್ರವು ತ್ರಿಭಾಷಾ ಸೂತ್ರದ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಕೇಂದ್ರ ಸರ್ಕಾರವು ಇದನ್ನು ನಿರಾಕರಿಸಿದೆ.
ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಮಾತನಾಡುವ ಅನೇಕ ಉತ್ತರ ಭಾರತೀಯ ಭಾಷೆಗಳಾದ ಮೈಥಿಲಿ, ಬ್ರಜ್‌ಭಾಷಾ, ಬುಂದೇಲ್‌ಖಂಡಿ ಮತ್ತು ಅವಧಿ ಭಾಷೆಯು ಹಿಂದಿ ಭಾಷೆಯ ಪ್ರಾಬಲ್ಯದಿಂದ ನಾಶವಾಗಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
" ಹಿಂದಿ-ಸಂಸ್ಕೃತ ಭಾಷೆಗಳ ಆಕ್ರಮಣದಿಂದ 25 ಕ್ಕೂ ಹೆಚ್ಚು ಉತ್ತರ ಭಾರತದ ಸ್ಥಳೀಯ ಭಾಷೆಗಳು ನಾಶವಾಗಿವೆ. ಶತಮಾನದಷ್ಟು ಹಳೆಯದಾದ ದ್ರಾವಿಡ ಚಳುವಳಿಯು ಅದು ಸೃಷ್ಟಿಸಿದ ಜಾಗೃತಿ ಮತ್ತು ವಿವಿಧ ಆಂದೋಲನಗಳಿಂದಾಗಿ ತಮಿಳು ಮತ್ತು ಅದರ ಸಂಸ್ಕೃತಿಯನ್ನು ರಕ್ಷಿಸಿದೆ" ಎಂದು ಆಡಳಿತಾರೂಢ ಡಿಎಂಕೆ ಮುಖ್ಯಸ್ಥರಾಗಿರುವ ಸ್ಟಾಲಿನ್ ಹೇಳಿದ್ದಾರೆ.
ಕೇಂದ್ರವು ನೂತನ ಶಿಕ್ಷಣ ನೀತಿಯ ಮೂಲಕ ಹಿಂದಿ ಮತ್ತು ಸಂಸ್ಕೃತವನ್ನು ಹೇರಲು ಪ್ರಯತ್ನಿಸುತ್ತಿರುವುದರಿಂದ ತಮಿಳುನಾಡು ಎನ್ಇಪಿಯನ್ನು ವಿರೋಧಿಸುತ್ತಿದೆ ಎಂದು ಅವರು ಹೇಳಿದರು.
ಎನ್ಇಪಿ ಪ್ರಕಾರ ಮೂರನೇ ಭಾಷೆ ವಿದೇಶಿ ಭಾಷೆಯೂ ಆಗಿರಬಹುದು ಎಂಬ ಬಿಜೆಪಿಯ ವಾದವನ್ನು ವಿರೋಧಿಸಿದ ಸ್ಟಾಲಿನ್, ತ್ರಿಭಾಷಾ ನೀತಿ ವೇಳಾಪಟ್ಟಿಯ ಪ್ರಕಾರ, " ಬಿಜೆಪಿ ಆಡಳಿತವಿರುವ ರಾಜಸ್ಥಾನವು ಉರ್ದು ಬೋಧಕರ ಬದಲಿಗೆ ಸಂಸ್ಕೃತ ಶಿಕ್ಷಕರನ್ನು ನೇಮಿಸುತ್ತಿದೆ. ಹಲವು ರಾಜ್ಯಗಳಲ್ಲಿ ಸಂಸ್ಕೃತವನ್ನು ಮಾತ್ರ ಪ್ರಚಾರ ಮಾಡಲಾಗುತ್ತಿದೆ" ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
"ಒಂದು ವೇಳೆ ತಮಿಳುನಾಡು ತ್ರಿಭಾಷಾ ನೀತಿಯನ್ನು ಒಪ್ಪಿಕೊಂಡರೆ, ಮಾತೃಭಾಷೆಯನ್ನು ನಿರ್ಲಕ್ಷಿಸುವ ಸಂದರ್ಭ ಬರಬಹುದು. ಆ ಮೂಲಕ ಭವಿಷ್ಯದಲ್ಲಿ ಸಂಸ್ಕೃತೀಕರಣ ನಡೆಯಬಹುದು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎನ್‌ಇಪಿಯ ನಿಬಂಧನೆಗಳು ಶಾಲೆಗಳಲ್ಲಿ ಸಂಸ್ಕೃತದ ಜೊತೆಗೆ ಇತರ ಭಾರತೀಯ ಭಾಷೆಗಳನ್ನು ಕಲಿಸಲಾಗುವುದು. ತಮಿಳಿನಂತಹ ಇತರ ಭಾಷೆಗಳನ್ನು ಆನ್‌ಲೈನ್‌ನಲ್ಲಿ ಕಲಿಸಬಹುದು ಎಂದು ಹೇಳುತ್ತವೆ. ಕೇಂದ್ರವು ತಮಿಳಿನಂತಹ ಭಾಷೆಗಳನ್ನು ತೆಗೆದುಹಾಕಿ ಸಂಸ್ಕೃತವನ್ನು ಹೇರಲು ಯೋಜಿಸಿದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ" ಎಂದು ಮುಖ್ಯಮಂತ್ರಿ ಸ್ಟಾಲಿನ್ ಆರೋಪಿಸಿದ್ದಾರೆ.
ದ್ರಾವಿಡ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ದಶಕಗಳ ಹಿಂದೆಯೇ ರಾಜ್ಯದಲ್ಲಿ ದ್ವಿಭಾಷಾ ನೀತಿಯನ್ನು ಕಡ್ಡಾಯಗೊಳಿಸಿದ್ದರು. ಹಿಂದಿ-ಸಂಸ್ಕೃತದ ಮೂಲಕ ಆರ್ಯ ಸಂಸ್ಕೃತಿಯನ್ನು ಹೇರಲು ಮತ್ತು ತಮಿಳು ಸಂಸ್ಕೃತಿಯನ್ನು ನಾಶಮಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.