ಪ್ರತಿಭಟನೆಗೆ ಒಂದು ದಿನ ಮೊದಲೇ ರೈತ ನಾಯಕ ದಲ್ಲೇವಾಲ್, ಹಲವು ರೈತ ನಾಯಕರಿಗೆ ಗೃಹ ಬಂಧನ
PC | PTI
ಚಂಡಿಗಢ: ಪ್ರತಿಭಟನೆಗೆ ಒಂದು ದಿನ ಮೊದಲೇ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಅವರನ್ನು ಫರೀದ್‌ಕೋಟ್ ಜಿಲ್ಲೆಯ ಗ್ರಾಮದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ.
ರಾಜ್ಯಾದ್ಯಂತ ಇತರ ಹಲವು ರೈತ ನಾಯಕರು ಹಾಗೂ ಸಾಮಾಜಿಕ ಹೋರಾಟಗಾರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಯಾವುದೇ ರೀತಿಯ ಕಾನೂನು ಹಾಗೂ ಸುವ್ಯವಸ್ಥೆಗೆ ಅಡ್ಡಿ ಉಂಟಾಗದಿರಲು ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.
ಪೊಲೀಸರ ತಂಡ ದಲ್ಲೇವಾಲ್ ಅವರ ಗ್ರಾಮಕ್ಕೆ ಮೇ 5ರಂದು ಮುಂಜಾನೆ ತಲುಪಿತು ಹಾಗೂ ಮೂರರಿಂದ ನಾಲ್ಕು ದಿನಗಳ ಕಾಲ ಮನೆಯ ಒಳಗೇ ಇರುವಂತೆ ಸೂಚಿಸಿತು ಎಂದು ಮೂಲಗಳು ತಿಳಿಸಿವೆ.
ದಲ್ಲೇವಾಲ್ ಅವರು ತನ್ನನ್ನು ಗೃಹಬಂಧನದಲ್ಲಿ ಇರಿಸಿರುವ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ರೈತ ಹಕ್ಕುಗಳ ಗುಂಪಿಗೆ ಆಮ್ ಆದ್ಮಿ ಪಕ್ಷದ ಸರಕಾರ ಕಿರುಕುಳ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಖನೌರಿ ಹಾಗೂ ಶಂಭು ಗಡಿಯಿಂದ ರೈತರನ್ನು ಬಲವಂತವಾಗಿ ತೆರವುಗೊಳಿಸಿದ ಸಂದರ್ಭ ರೈತರು ಪೊಲೀಸರ ದುರ್ನಡತೆಯನ್ನು ಎದುರಿಸಿದ್ದಾರೆ ಎಂದು ದಲ್ಲೇವಾಲ್ ಆರೋಪಿಸಿದ್ದಾರೆ. ಟ್ರಾಕ್ಟರ್‌ಗಳು ಸೇರಿದಂತೆ ತಮ್ಮ ಹಲವು ವಸ್ತುಗಳು ಕಾಣೆಯಾಗಿವೆ ಎಂದು ಕೂಡ ಅವರು ಹೇಳಿದ್ದಾರೆ.
ಅನಂತರ ಸರಕಾರ ನಷ್ಟ ಪರಿಹಾರ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ, ನಾವು ಕಾಣೆಯಾದ ವಸ್ತುಗಳಿಗೆ ಪರಿಹಾರ ಆಗ್ರಹಿಸಿದಾಗ, ಆಪ್ ನಾಯಕರ ನಿಕಟ ಸಹವರ್ತಿಗಳು ಹಾಗೂ ಪೊಲೀಸ್ ಸಿಬ್ಬಂದಿ ಬಳಿ ಅದು ಪತ್ತೆಯಾಯಿತು. ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ರೈತರ ವಿರುದ್ಧ ಪ್ರಕರಣ ದಾಖಲಿಸಿದರು ಎಂದು ಅವರು ಹೇಳಿದ್ದಾರೆ.
ಈಗ ನಾವು ಪೊಲೀಸರ ವರ್ತನೆ ವಿರುದ್ಧ ಮೇ 6ರಂದು ಪ್ರತಿಭಟನೆ ನಡೆಸಲು ಯೋಜಿಸಿದ್ದೇವೆ. ಆದರೆ, ಸರಕಾರ ನಮ್ಮ ಚಳುವಳಿಯನ್ನು ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.