×
Ad

ವಕ್ಫ್ ಆಸ್ತಿಯಲ್ಲಿ ಭಾರೀ ಏರಿಕೆ: ಕೇಂದ್ರದ ವಾದವನ್ನು ಅಲ್ಲಗಳೆದ ಅರ್ಜಿದಾರರು

Update: 2025-05-04 08:21 IST

PC: PTI

ಹೊಸದಿಲ್ಲಿ: ದೇಶದಲ್ಲಿ 2013ರ ಬಳಿಕ ವಕ್ಫ್ ಆಸ್ತಿಯಲ್ಲಿ ಆಘಾತಕಾರಿ ಎನಿಸುವಷ್ಟು ಅಂದರೆ ಶೇಕಡ 116ರಷ್ಟು ಏರಿಕೆಯಾಗಿದೆ ಎಂಬ ಕೇಂದ್ರ ಸರ್ಕಾರದ ವರದಿಯನ್ನು ವಕ್ಫ್ ತಿದ್ದುಪಡಿ ಕಾಯ್ದೆ-2025ರ ಕ್ರಮಬದ್ಧತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರು ಅಲ್ಲಗಳೆದಿದ್ದಾರೆ. ಕೇಂದ್ರದ ಈ ಹೇಳಿಕೆ ತಪ್ಪುದಾರಿಗೆ ಎಳೆಯುವಂಥದ್ದು ಮತ್ತು ವಾಸ್ತವ ಅಂಕಿ ಅಂಶಗಳನ್ನು ಹತ್ತಿಕ್ಕಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಕೇಂದ್ರ ಸರ್ಕಾರ ಹೊಸ ಆಸ್ತಿಗಳು ಎಂದು ಪರಿಗಣಿಸಿದ ಆಸ್ತಿಗಳು ವಾಸ್ತವವಾಗಿ 2013ಕ್ಕೆ ಮುನ್ನ ನೋಂದಣಿಯಾಗಿದ್ದವು; ಆದರೆ ಭಾರತದ ವಕ್ಫ್ ಆಸ್ತಿ ನಿರ್ವಹಣಾ ವ್ಯವಸ್ಥೆ ಪೋರ್ಟಲ್ ನಲ್ಲಿ ಇದನ್ನು ಆ ಬಳಿಕ ಅಪ್ ಡೇಟ್ ಮಾಡಲಾಗಿದೆ ಎಂಬ ವಾಸ್ತವಾಂಶವನ್ನು ಉಲ್ಲೇಖಿಸಲು ವಿಫಲವಾಗಿದ್ದು, ತಪ್ಪಾಗಿ ಹೇಳಿಕೆ ಸಲ್ಲಿಸಿದೆ ಎಂದು ವಕೀಲ ತೆಹ್ಲಾ ಅಬ್ದುಲ್ ರಹಮಾನ್ ಅವರು ಹೇಳಿದ್ದಾರೆ.

ಈ ಪೋರ್ಟಲ್ ನ ಉಸ್ತುವಾರಿ ಹೊಂದಿದ್ದ ಸರ್ಕಾರಿ ಅಧಿಕಾರಿಯೊಬ್ಬರು ಉದ್ದೇಶಪೂರ್ವಕವಾಗಿ ವಾಸ್ತವಾಂಶವನ್ನು ಮುಚ್ಚಿಟ್ಟಿದ್ದಾರೆ ಅಥವಾ ನಿರ್ಲಕ್ಷ್ಯದಿಂದ ಈ ಆಸ್ತಿಗಳು ಇರಲಿಲ್ಲ ಎಂದು ಸುಳ್ಳಾಗಿ ಬಿಂಬಿಸುವ ಚಾರ್ಟ್ ಸಿದ್ಧಪಡಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ ಅಫಿಡವಿಟ್ ನಲ್ಲಿ ಹೇಳಿದ್ದಾರೆ. ಇದಕ್ಕೆ ಯಾವುದೇ ದಾಖಲೆಗಳಿಲ್ಲ ಮತ್ತು ವಾದ ಮಂಡಿಸುವ ವೇಳೆ ದುರುದ್ದೇಶಪೂರ್ವಕ ಆರೋಪ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸುವ ನಿಲುವನ್ನು ವ್ಯಕ್ತಪಡಿಸಿ ಕೇಂದ್ರ ಸರ್ಕಾರ ಏಪ್ರಿಲ್ 25ರಂದು ಅಫಿಡಿವಿಟ್ ಸಲ್ಲಿಸಿತ್ತು. ಸ್ವಾತಂತ್ರ್ಯಪೂರ್ವದಲ್ಲಿದ್ದ ಆಸ್ತಿಗಳು ಸೇರಿದಂತೆ 2013ರವರೆಗೆ ವಕ್ಫ್ ವ್ಯಾಪ್ತಿಯಲ್ಲಿ 18 ಲಕ್ಷ ಎಕರೆ ವಿಸ್ತೀರ್ಣದ ಆಸ್ತಿಗಳಿದ್ದವು. ಆದರೆ 2013ರಿಂದ 2024ರ ಅವಧಿಯಲ್ಲಿ 20 ಲಕ್ಷ ಎಕರೆ ಸೇರ್ಪಡೆಯಾಗಿದೆ ಎಂದು ಇದರಲ್ಲಿ ವಿವರಿಸಲಾಗಿತ್ತು. ಶೇಕಡ 116ರಷ್ಟು ಬೆಳವಣಿಗೆ ಆಗಿರುವುದು ಆಘಾತಕಾರಿ ಮತ್ತು ಸರ್ಕಾರಿ ಹಾಗೂ ಖಾಸಗಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ವಕ್ಫ್ ಆಸ್ತಿಗಳನ್ನು ನಿರ್ವಹಿಸಲು ಕಾನೂನು ಅಗತ್ಯ ಎಂದು ಕೇಂದ್ರ ಸರ್ಕಾರ ವಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News