×
Ad

ಭಾರತದ ಎಚ್ಚರಿಕೆ ನಡುವೆಯೂ ಪಾಕಿಸ್ತಾನಕ್ಕೆ 100 ಕೋಟಿ ಡಾಲರ್ ಸಾಲ ಮಂಜೂರು ಮಾಡಿದ ಐಎಂಎಫ್

Update: 2025-05-10 08:07 IST

PC | IMF

ಹೊಸದಿಲ್ಲಿ: ಪಾಕಿಸ್ತಾನ ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು ನೀಡುತ್ತಿದೆ ಎಂದು ಭಾರತ ಗಂಭೀರ ಆರೋಪ ಮಾಡಿದರೂ, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಆ ದೇಶಕ್ಕೆ 100 ಕೋಟಿ ರೂಪಾಯಿಗಳ ಸಾಲ ಮಂಜೂರು ಮಾಡಿದೆ. ಐಎಂಎಫ್ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತ, ಸರ್ಕಾರಿ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಇದನ್ನು ಬಳಸಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದೆ.

ವಾಷಿಂಗ್ಟನ್‍ ನಲ್ಲಿ ನಡೆದ ಸಭೆಯಲ್ಲಿ ಐಎಂಎಫ್ ಆಡಳಿತ ಮಂಡಳಿ ಈ ನೆರವು ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದ್ದು, ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆ ಸೌಲಭ್ಯದಡಿ 1.3 ಶತಕೋಟಿ ಡಾಲರ್ ನೆರವು ನೀಡುವಂತೆ ಪಾಕಿಸ್ತಾನ ಮಾಡಿಕೊಂಡ ಮನವಿಯನ್ನೂ ಪರಾಮರ್ಶೆ ನಡೆಸಿದೆ. ಭಾರತ ಇದಕ್ಕೆ ಅಧಿಕೃತ ಪ್ರತಿಭಟನೆ ವ್ಯಕ್ತಪಡಿಸಿದ್ದು, ಐಎಂಎಫ್ ಸುಧಾರಣೆಗಳಿಗೆ ಪಾಕಿಸ್ತಾನ ಸ್ಪಂದಿಸಿಲ್ಲ ಹಾಗೂ ನಿಧಿಯನ್ನು ಇತರ ಉದ್ದೇಶಗಳಿಗೆ ವಿಮುಖಗೊಳಿಸುವ ಅಪಾಯವಿದೆ ಎಂದು ಹೇಳಿದೆ. ಭಾರತ ಈ ಕುರಿತ ಮತದಾನದಿಂದ ದೂರ ಉಳಿಯಿತು.

"ಗಡಿಯಾಚೆಗಿನ ಭಯೋತ್ಪಾದನೆ ಪ್ರಾಯೋಜಿಸುತ್ತಿರುವುದನ್ನು ಮುಂದುವರಿಸಿರುವುದಕ್ಕೆ ಬಹುಮಾನ ನೀಡಿರುವುದು ಅಪಾಯಕಾರಿ ಸಂದೇಶ" ಎಂದು ಹಣಕಾಸು ಸಚಿವಾಲಯ ಪ್ರತಿಕ್ರಿಯೆ ನೀಡಿದೆ. ಜಾಗತಿಕ ಮೌಲ್ಯಗಳು ಮತ್ತು ಘನತೆಗೆ ಧಕ್ಕೆ ಬರಬಹುದಾದ ಸಾಧ್ಯತೆಯನ್ನು ಹಣಕಾಸು ಸಂಸ್ಥೆ ಕಡೆಗಣಿಸಿದೆ ಎಂದು ವಿವರಿಸಿದೆ.

ಈ ಐಎಂಎಫ್ ನಡೆಯನ್ನು ಪಾಕಿಸ್ತಾನ ಸ್ವಾಗತಿಸಿದ್ದು, ಇದು ಭಾರತದ ತಂತ್ರಗಾರಿಕೆಗೆ ಆಗಿರುವ ಸೋಲು ಎಂದು ಬಣ್ಣಿಸಿದೆ. ಪಾಕಿಸ್ತಾನದ ಆರ್ಥಿಕತೆಯ ಪುನಶ್ಚೇತನದ ಬಗ್ಗೆ ಇರುವ ಅಂತರರಾಷ್ಟ್ರೀಯ ವಿಶ್ವಾಸದ ಪ್ರತೀಕ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News