×
Ad

ಮನೆಯಲ್ಲಿ ನಗದು ಪತ್ತೆ ಪ್ರಕರಣ| ನ್ಯಾ.ವರ್ಮಾ ವಿರುದ್ಧ ಮಹಾಭಿಯೋಗವು ಸಂಸತ್ತಿನ ವಿಷಯ, ಕೇಂದ್ರವು ಅದರಲ್ಲಿಲ್ಲ: ಕೇಂದ್ರ ಕಾನೂನು ಸಚಿವ

Update: 2025-07-19 17:02 IST

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ | PTI

ಹೊಸದಿಲ್ಲಿ: ಲೆಕ್ಕಪತ್ರವಿಲ್ಲದ ನಗದು ಹಣದ ವಿವಾದ ಕುರಿತು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಯಶವಂತ ಶರ್ಮಾ ಅವರನ್ನು ಮಹಾಭಿಯೋಗಕ್ಕೆ ಗುರಿ ಪಡಿಸುವ ನಿರ್ಣಯವು ಸಂಸತ್ತು ನಿರ್ವಹಿಸಬೇಕಾದ ವಿಷಯವಾಗಿದೆ ಮತ್ತು ಕೇಂದ್ರ ಸರಕಾರವು ಅದರಲ್ಲಿಲ್ಲ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಸ್ಪಷ್ಟಪಡಿಸಿದ್ದಾರೆ.

ಸಂವಿಧಾನವು ಪದಚ್ಯುತಿ ನಿರ್ಣಯವನ್ನು ತರಲು ಸಂಸತ್ತಿಗೆ ಅವಕಾಶ ನೀಡಿದೆ. ಲೋಕಸಭೆಯ 100 ಅಥವಾ ಹೆಚ್ಚು ಮತ್ತು ರಾಜ್ಯಸಭೆಯ 50 ಅಥವಾ ಹೆಚ್ಚು ಸದಸ್ಯರು ನಿರ್ಣಯಕ್ಕೆ ಸಹಿ ಹಾಕಿರಬೇಕು. ಹೀಗಾಗಿ ಇದು ಸಂಪೂರ್ಣವಾಗಿ ಸಂಸದರಿಗೆ ಸಂಬಂಧಿಸಿದ ವಿಷಯವಾಗಿದೆ,ಸರಕಾರಕ್ಕಲ್ಲ ಎಂದು ಶುಕ್ರವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮೇಘ್ವಾಲ್ ತಿಳಿಸಿದರು.

ತನ್ನ ಮೇಲೆ ದೋಷಾರೋಪವನ್ನು ಹೊರಿಸಿರುವ ಆಂತರಿಕ ತನಿಖಾ ಸಮಿತಿಯ ವರದಿಯನ್ನು ಗುರುವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ನ್ಯಾ.ವರ್ಮಾ,ಸಮಿತಿಯು ತನಗೆ ಪ್ರತಿಕ್ರಿಯಿಸಲು ಅವಕಾಶ ನೀಡದೇ ತೀರ್ಮಾನಗಳನ್ನು ತೆಗೆದುಕೊಂಡಿದೆ ಎಂದು ವಾದಿಸಿದ್ದಾರೆ.

ಈ ವಿಷಯದ ತನಿಖೆಗಾಗಿ ಆಗಿನ ಭಾರತದ ಮುಖ್ಯ ನ್ಯಾಯಾಧೀಶ ಸಂಜೀವ ಖನ್ನಾ ಅವರು ರಚಿಸಿದ್ದ ಆಂತರಿಕ ಸಮಿತಿಯು ಈಗಾಗಲೇ ತನ್ನ ವರದಿಯನ್ನು ಸಲ್ಲಿಸಿದೆ ಎಂದೂ ಮೇಘ್ವಾಲ್ ಶುಕ್ರವಾರ ತಿಳಿಸಿದರು.

ವರದಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು ವರ್ಮಾ ಅವರ ಹಕ್ಕು,ಆದರೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ ನ್ಯಾಯಾಧೀಶರನ್ನು ವಜಾಗೊಳಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ ಎಂದು ಸಚಿವರು ತಿಳಿಸಿದರು.

ತನ್ನನ್ನು ವಜಾಗೊಳಿಸುವಂತೆ ನ್ಯಾ.ಖನ್ನಾ ಅವರು ಮೇ 8ರಂದು ಮಾಡಿರುವ ಶಿಫಾರಸನ್ನು ರದ್ದುಗೊಳಿಸುವಂತೆಯೂ ನ್ಯಾ.ವರ್ಮಾ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದಾರೆ.

ಸೋಮವಾರದಿಂದ ಆರಂಭಗೊಳ್ಳಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಮುನ್ನ ಈ ಬೆಳವಣಿಗೆಗಳು ನಡೆದಿವೆ. ವರದಿಗಳ ಪ್ರಕಾರ ಅಧಿವೇಶನದಲ್ಲಿ ವರ್ಮಾ ವಿರುದ್ಧ ಮಹಾಭಿಯೋಗ ನಿರ್ಣಯವನ್ನು ಮಂಡಿಸುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News