×
Ad

ಸಾಮೂಹಿಕ ಅತ್ಯಾಚಾರದಲ್ಲಿ ಒಬ್ಬನ ಕೃತ್ಯಕ್ಕೆ ಸಹಕರಿಸುವ ಇತರರೂ ಸಮಾನ ಹೊಣೆಗಾರರು: ಸುಪ್ರೀಂ ಕೋರ್ಟ್

Update: 2025-05-05 07:45 IST

ಹೊಸದಿಲ್ಲಿ: ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಒಬ್ಬನೇ ವ್ಯಕ್ತಿ ಅತ್ಯಾಚಾರ ಎಸಗಿದರೂ, ಈ ಕೃತ್ಯದಲ್ಲಿ ಆತನಿಗೆ ಸಹಕರಿಸುವ ಎಲ್ಲರೂ ಸಮಾನ ಹೊಣೆಗಾರರಾಗಿರುತ್ತಾರೆ ಮತ್ತು ಎಲ್ಲರಿಗೂ ಸಮಾನವಾಗಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂಥ ಪ್ರಕರಣಗಳಲ್ಲಿ ಅಭಿಯೋಜಕರು ಪ್ರತಿಯೊಬ್ಬ ಆರೋಪಿಯ ಬಗ್ಗೆಯೂ ಪುರಾವೆ ಸಂಗ್ರಹಿಸಿ ಸಾಬೀತುಪಡಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಕೋರ್ಟ್ ಬಂದಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. "ಅತ್ಯಾಚಾರ ಸಂತ್ರಸ್ತೆ ಎಫ್ಐಆರ್‌ನಲ್ಲಿ ನನ್ನ ಹೆಸರು ಉಲ್ಲೇಖಿಸಿಲ್ಲ ಹಾಗೂ ನನ್ನ ಪಾತ್ರ ಮುಖ್ಯ ಆರೋಪಿಗೆ ಸಹಕಾರ ನೀಡಿದಷ್ಟಕ್ಕೆ ಸೀಮಿತ" ಎಂಬ ಒಬ್ಬ ಆರೋಪಿಯ ವಾದವನ್ನು ನ್ಯಾಯಪೀಠ ಅಲ್ಲಗಳೆದಿದೆ.

"ಸೆಕ್ಷನ್ 376(2)(ಜಿ) ಅನ್ವಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಒಬ್ಬನ ಕೃತ್ಯ, ಇಡೀ ಗ್ಯಾಂಗ್ ನ ಎಲ್ಲರಿಗೂ ಶಿಕ್ಷೆ ವಿಧಿಸಲು ಸಾಕಾಗುತ್ತದೆ. ಇಡೀ ಗ್ಯಾಂಗ್ ನ ಎಲ್ಲ ಸದಸ್ಯರ ಉದ್ದೇಶ ಸಮಾನ ಎನ್ನುವುದನ್ನು ನಿರೂಪಿಸಿದರೆ ಸಾಕು ಎಂದು ವಿಶ್ಲೇಷಿಸಿದೆ.

ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಸೆಕ್ಷನ್ 376(2)(ಜಿ) ಅಡಿಯ ಅಪರಾಧದಲ್ಲಿ ಒಬ್ಬನಿಗಿಂತ ಹೆಚ್ಚು ಆರೋಪಿ ಇಂಥ ಪ್ರಕರಣದಲ್ಲಿ ಷಾಮೀಲಾಗಿದ್ದಾನೆ ಎಂದು ಅಭಿಯೋಜಕರು ಸಾಬೀತುಪಡಿಸಿದ ಸಂದರ್ಭದಲ್ಲಿ, ಒಬ್ಬನೇ ಆರೋಪಿ ಕೃತ್ಯ ಎಸಗಿದ್ದರೂ, ಎಲ್ಲರೂ ಅದಕ್ಕೆ ಸಮಾನ ಹೊಣೆಗಾರರು. ಪ್ರತಿಯೊಬ್ಬ ಆರೋಪಿಯ ವಿರುದ್ಧವೂ ಸಾಕ್ಷ್ಯವನ್ನು ಸಾಬೀತುಪಡಿಸುವ ಅಗತ್ಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News