×
Ad

ಪಶ್ಚಿಮ ಆಫ್ರಿಕಾದಲ್ಲಿ ಜನರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ : ಬಿಬಿಸಿ ವರದಿ ಬೆನ್ನಲ್ಲೇ ಎರಡು ಔಷಧಿಗಳ ತಯಾರಿ, ರಫ್ತು ನಿಷೇಧಿಸಿದ ಭಾರತ

Update: 2025-02-23 22:05 IST

Photo | BBC

ಹೊಸದಿಲ್ಲಿ : ಪಶ್ಚಿಮ ಆಫ್ರಿಕಾದ ಕೆಲವು ಭಾಗಗಳಲ್ಲಿ ಜನರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತಿದೆ ಎಂದು ಬಿಬಿಸಿ(BBC) ತನಿಖೆಯೊಂದು ಬಯಲುಗೊಳಿಸಿದ ಬೆನ್ನಲ್ಲೇ ಭಾರತ ಎರಡು ಔಷಧಿಗಳ ತಯಾರಿ ಮತ್ತು ರಫ್ತಿಗೆ ನಿಷೇಧವನ್ನು ವಿಧಿಸಿದೆ.

ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಡಾ. ರಾಜೀವ್ ಸಿಂಗ್ ರಘುವಂಶಿ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಟಪೆಂಟಡಾಲ್(tapentadol) ಮತ್ತು ಕ್ಯಾರಿಸೊಪ್ರೊಡಾಲ್(carisoprodol) ಔಷಧಗಳ ತಯಾರಿ ಮತ್ತು ರಫ್ತು ಅನುಮತಿಯನ್ನು ಹಿಂಪಡೆಯಲಾಗಿದೆ. ಅಕ್ರಮ ರಫ್ತಿಗೆ ಸಂಬಂಧಿಸಿ ಔಷಧಿ ತಯಾರಿಕಾ ಕಂಪೆನಿ Aveoಗೆ ಶೋಕಾಸ್ ನೋಟಿಸ್ ನೀಡಿದೆ.

ಘಾನಾ, ನೈಜೀರಿಯಾ ಸೇರಿದಂತೆ ಕೆಲ ದೇಶಗಳಲ್ಲಿ ಟಪೆಂಟಡಾಲ್ ಮತ್ತು ಕ್ಯಾರಿಸೊಪ್ರೊಡಾಲ್ ಔಷಧಿಗಳು ಆರೋಗ್ಯ ಬಿಕ್ಕಟ್ಟಿಗೆ ಕಾರಣವಾಗಿದೆ. ಏವಿಯೋ(Aveo) ಫಾರ್ಮಾಸ್ಯುಟಿಕಲ್ಸ್ ಔಷಧೀಯ ಕಂಪನಿಯು ಈ ಔಷಧಿಯನ್ನು ರಫ್ತು ಮಾಡುತ್ತಿದೆ ಎಂದು ಬಿಬಿಸಿ ಪತ್ತೆಹಚ್ಚಿದೆ. ಇದರ ಬೆನ್ನಲ್ಲೇ ಮುಂಬೈನಲ್ಲಿರುವ ಕಂಪೆನಿಯ ಮೇಲೆ ದಾಳಿ ನಡೆಸಿದ ಎಫ್‌ಡಿಎ, ಟಪೆಂಟಡಾಲ್ ಮತ್ತು ಕ್ಯಾರಿಸೊಪ್ರೊಡಾಲ್ ಔಷಧಿಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಡಾ.ರಘುವಂಶಿಯವರು ಶುಕ್ರವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಜನರ ಮೇಲೆ ಉಂಟಾದ ಹಾನಿಕಾರಕ ಪರಿಣಾಮವನ್ನು ಪರಿಶೀಲಿಸಿ ಟ್ಯಾಪೆಂಟಡಾಲ್ ಮತ್ತು ಕ್ಯಾರಿಸೊಪ್ರೊಡಾಲ್ ಸಂಯೋಜಿತ ಔಷಧಿಯನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.  

ಟಪೆಂಟಡಾಲ್ ಮತ್ತು ಕ್ಯಾರಿಸೊಪ್ರೊಡಾಲ್ ಔಷಧಿಗಳನ್ನು ಯುರೋಪ್‌ನಲ್ಲಿ ನಿಷೇಧಿಸಲಾಗಿದೆ. ಎರಡು ಔಷಧಿಗಳ ಸಂಯೋಜಿತ ಬಳಕೆಯನ್ನು ಜಗತ್ತಿನಲ್ಲಿ ಎಲ್ಲಿಯೂ ಬಳಸಲು ಪರವಾನಗಿ ನೀಡಿಲ್ಲ. ಏಕೆಂದರೆ ಅವುಗಳು ಉಸಿರಾಟದ ತೊಂದರೆ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಔಷಧಿಗಳ ಮಿತಿಮೀರಿದ ಸೇವನೆಯು ಪ್ರಾಣಕ್ಕೆ ಹಾನಿಕಾರಕವಾಗಿದೆ.

ಟಪೆಂಟಡಾಲ್ ಮತ್ತು ಕ್ಯಾರಿಸೊಪ್ರೊಡಾಲ್ ಔಷಧಿಗಳು ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ಜನಪ್ರಿಯ ಔಷಧಗಳಾಗಿವೆ, ಏಕೆಂದರೆ ಅವು ತುಂಬಾ ಅಗ್ಗವಾಗಿವೆ ಮತ್ತು ವ್ಯಾಪಕವಾಗಿ ಲಭ್ಯವಿದೆ. ರಫ್ತು ಡೇಟಾ ಪ್ರಕಾರ, ವೆಸ್ಟ್ ಫಿನ್ ಇಂಟರ್‌ನ್ಯಾಶನಲ್ ಎಂಬ ಕಂಪೆನಿಯೊಂದಿಗೆ ಸೇರಿಕೊಂಡು Aveo ಫಾರ್ಮಾಸ್ಯುಟಿಕಲ್ಸ್ ಈ ಔಷಧಿಗಳನ್ನು ಘಾನಾ ಮತ್ತು ಇತರ ಪಶ್ಚಿಮ ಆಫ್ರಿಕಾದ ದೇಶಗಳಿಗೆ ರವಾನಿಸಿದೆ ಎಂಬುವುದನ್ನು ತೋರಿಸುತ್ತದೆ.

ಬಿಬಿಸಿ ನೈಜೀರಿಯಾದ ಬೀದಿಗಳಲ್ಲಿ ಮತ್ತು ಐವೊರಿಯನ್ ಪಟ್ಟಣಗಳಲ್ಲಿ Aveo ಲೋಗೋದೊಂದಿಗೆ ಈ ಮಾತ್ರೆಗಳ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದೆ. ಬಿಬಿಸಿಯ ರಹಸ್ಯ ಕಾರ್ಯಾಚರಣೆಯಲ್ಲಿ Aveo ಫಾರ್ಮಸಿಟಿಕಲ್ಸ್ ನಿರ್ದೇಶಕ ವಿನೋದ್ ಶರ್ಮಾ ಮಾತನಾಡಿ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದರೂ, ಇತ್ತೀಚಿನ ದಿನಗಳಲ್ಲಿ ಇದು ವ್ಯಾಪಾರವಾಗಿದೆ ಎಂದು ಹೇಳುವುದು ಕಂಡು ಬಂದಿದೆ. ಇದರ ಬೆನ್ನಲ್ಲೇ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್‌ ಇಂಡಿಯಾ ಈ ಆದೇಶವನ್ನು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News