ಪಾಕಿಸ್ತಾನದ ದುಷ್ಕೃತ್ಯಗಳಿಗೆ ಪ್ರತಿಕ್ರಿಯಿಸಲು ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ: ʼಆಪರೇಷನ್ ಸಿಂಧೂರʼ ಬಳಿಕ ಭಾರತೀಯ ಸೇನೆ ಹೇಳಿಕೆ
Photo credit: PTI
ಹೊಸದಿಲ್ಲಿ: ʼಪಾಕಿಸ್ತಾನದ ದುಷ್ಕೃತ್ಯಗಳಿಗೆʼ ಪ್ರತಿಕ್ರಿಯಿಸಲು ಭಾರತೀಯ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಭಾರತೀಯ ಸೇನೆ ಬುಧವಾರ ತಿಳಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ ಈ ಹೇಳಿಕೆಯನ್ನು ನೀಡಿದೆ.
ʼಆಪರೇಷನ್ ಸಿಂಧೂರʼ ಕಾರ್ಯಾಚರಣೆಯ ಭಾಗವಾಗಿ ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕರ 9 ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ, ಬೆಳಗಿನ ಜಾವ 1.05 ರಿಂದ 1.30ರ ನಡುವೆ ಕಾರ್ಯಾಚರಣೆ ನಡೆಸಲಾಯಿತು ಎಂದು ಹೇಳಿದರು.
ಭಯೋತ್ಪಾದಕರ ನೆಲೆಗಳ ಮೇಲಿನ ದಾಳಿಯನ್ನು ನಿಖರವಾಗಿ ಕೈಗೊಳ್ಳಲಾಯಿತು ಎಂದು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಯ್ದ ನೆಲೆಗಳ ಮೇಲೆ ನಡೆಸಿದ ದಾಳಿಯ ಬಗ್ಗೆ ವೀಡಿಯೊಗಳನ್ನು ಸೇನೆಯು ತೋರಿಸಿದೆ. ಬಹಾವಲ್ಪುರದ ಜೈಶೆ ಮೊಹಮ್ಮದ್‌ಗೆ ಸೇರಿದ ನೆಲೆಗಳು, ಮುರಿಡ್ಕೆಯಲ್ಲಿರುವ ಲಷ್ಕರೆ ತೈಬಾಗೆ ಸೇರಿದ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.