ಹೊಸದಾಗಿ ಪರಿಚಯಿಸಲಾಗಿರುವ ಇ-ಪಾಸ್‌ಪೋರ್ಟ್ ಏನೆಲ್ಲ ಭದ್ರತಾ ನವೀಕರಣಗಳನ್ನು ಹೊಂದಿದೆ?; ಇಲ್ಲಿದೆ ಮಾಹಿತಿ...
ಪಾಸ್‌ಪೋರ್ಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಸಜ್ಜಾದ ಭಾರತ
ಸಾಂದರ್ಭಿಕ ಚಿತ್ರ | Photo Credit : indiatoday.in
ಹೊಸದಿಲ್ಲಿ: ಭಾರತವು ತನ್ನ ಪಾಸ್‌ಪೋರ್ಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಸಜ್ಜಾಗಿದ್ದು, ಮುಂದಿನ ಪೀಳಿಗೆಯ ಇ-ಪಾಸ್‌ಪೋರ್ಟ್‌ಗಳನ್ನು ಪರಿಚಯಿಸಿದೆ. ಈ ನೂತನ ಪಾಸ್‌ಪೋರ್ಟ್‌ಗಳು ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿವೆ.
ನೂತನ ಯೋಜನೆಯಡಿ ಹೊಸದಾಗಿ ನೀಡಲಾಗುವ ಎಲ್ಲ ಪಾಸ್‌ಪೋರ್ಟ್‌ಗಳು ಇ-ಪಾಸ್‌ಪೋರ್ಟ್‌ಗಳಾಗಿರುತ್ತವೆ ಮತ್ತು ಅಸ್ತಿತ್ವದಲ್ಲಿರುವ ವಿದ್ಯುನ್ಮಾನೇತರ ಪಾಸ್‌ಪೋರ್ಟ್‌ಗಳು ಅವುಗಳ ಅವಧಿ ಮುಗಿಯುವವರೆಗೆ ಮಾನ್ಯವಾಗಿರುತ್ತವೆ. ಸರಕಾರವು ಜೂನ್ 2035ರ ವೇಳೆಗೆ ಇ-ಪಾಸ್‌ಪೋರ್ಟ್‌ಗಳಿಗೆ ಸಂಪೂರ್ಣ ಪರಿವರ್ತನೆಯನ್ನು ಯೋಜಿಸಿದೆ.
ಪ್ರತಿಯೊಂದು ಇ-ಪಾಸ್‌ಪೋರ್ಟ್‌ನಲ್ಲಿ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ಚಿಪ್ ಮತ್ತು ಆ್ಯಂಟೆನಾ ಅಳವಡಿಸಲಾಗಿದ್ದು,ಇವು ಛಾಯಾಚಿತ್ರಗಳು ಮತ್ತು ಬೆರಳಚ್ಚುಗಳಂತಹ ಎನ್‌ಕ್ರಿಪ್ಟೆಡ್ ಬಯೊಮೆಟ್ರಿಕ್ ಮತ್ತು ವೈಯಕ್ತಿಕ ಡೇಟಾವನ್ನು ಅಂತರರಾಷ್ಟ್ರೀಯ ವಾಯುಯಾನ ಸಂಸ್ಥೆಯ(ಐಸಿಎಒ) ಮಾನದಂಡಗಳಿಗೆ ಅನುಗುಣವಾಗಿ ಡಿಜಿಟಲ್ ಸಹಿ ಮಾಡಿದ ಸ್ವರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸುತ್ತವೆ.
ಈ ಚಿಪ್‌ಗಳ ಸಂಪರ್ಕರಹಿತ ಡೇಟಾ ಓದುವ ಸಾಮರ್ಥ್ಯವು ವಲಸೆ ಕೌಂಟರ್‌ಗಳಲ್ಲಿ ವೇಗವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿ ಗುರುತು ಪರಿಶೀಲನೆಯನ್ನು ಸಾಧ್ಯವಾಗಿಸುತ್ತದೆ, ಜೊತೆಗೆ ವಂಚನೆ, ತಿರುಚುವಿಕೆ ಮತ್ತು ಸವೆತವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಈವರೆಗೆ ದೇಶಿಯವಾಗಿ 80 ಲಕ್ಷ ಮತ್ತು ವಿದೇಶಗಳಲ್ಲಿಯ ಭಾರತೀಯ ರಾಯಭಾರ ಕಚೇರಿಗಳ ಮೂಲಕ 60,000ಕ್ಕೂ ಅಧಿಕ ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸಿದೆ.
ಪರಿಷ್ಕೃತ ವ್ಯವಸ್ಥೆಯು ಪಾಸ್‌ಪೋರ್ಟ್ ವಂಚನೆಯನ್ನು ತೀವ್ರವಾಗಿ ತಗ್ಗಿಸುತ್ತದೆ ಮತ್ತು ವ್ಯಕ್ತಿಗಳು ಬಹು ಪಾಸ್‌ಪೋರ್ಟ್‌ಗಳನ್ನು ಪಡೆಯುವುದನ್ನು ತಡೆಯುತ್ತದೆ ಎಂದು ಹಿರಿಯ ಎಂಇಎ ಅಧಿಕಾರಿಗಳು ಹೇಳಿದರು.
ಹೊಸ ವ್ಯವಸ್ಥೆಯು ಅರ್ಜಿದಾರರ ಬಯೊಮೆಟ್ರಿಕ್ ಡೇಟಾವನ್ನು ಕೇಂದ್ರ ಸರ್ವರ್‌ನಲ್ಲಿ ಪರಿಶೀಲಿಸುತ್ತದೆ ಮತ್ತು ಅವರ ಹೆಸರಿನಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಪಾಸ್‌ಪೋರ್ಟ್ ಬಗ್ಗೆ ತಕ್ಷಣವೇ ಮಾಹಿತಿ ನೀಡುತ್ತದೆ.
ಕೃಪೆ: indiatoday.in