'ಇಂಡಿಯಾ'ಒಕ್ಕೂಟವು ಸನಾತನ ಸಂಸ್ಕೃತಿಗೆ ಬೆದರಿಕೆಯಾಗಿದೆ: ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
Photo:Twitter@ NDTV
ಭೋಪಾಲ್: ಪ್ರತಿಪಕ್ಷಗಳ ವಿರುದ್ಧ ಗುರುವಾರ ಬಿರುಸಿನ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ 'ಇಂಡಿಯಾ' ಒಕ್ಕೂಟವು 'ಸನಾತನ ಧರ್ಮ'ಕ್ಕೆ, ದೇಶದ ಸಂಸ್ಕೃತಿ ಮತ್ತು ನಾಗರಿಕರಿಗೆ ಬೆದರಿಕೆಯನ್ನು ತಂದೊಡ್ಡುತ್ತಿದೆ ಎಂದು ಆರೋಪಿಸಿದರು.
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು "ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ" ಹೇಳಿಕೆ ನೀಡಿದ ನಂತರ ವಿವಾದ ಭುಗಿಲೆದ್ದಿದೆ. ಈ ಹೇಳಿಕೆಗೆ "ಸರಿಯಾದ ಪ್ರತಿಕ್ರಿಯೆ" ನೀಡುವಂತೆ ಪಿಎಂ ಮೋದಿ ಈ ಹಿಂದೆ ತಮ್ಮ ಮಂತ್ರಿಗಳನ್ನು ಒತ್ತಾಯಿಸಿದ್ದರು.
ಇದೀಗ, ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ 'ಘಮಾಂಡಿಯಾ' ಮೈತ್ರಿಯು 'ಸನಾತನ ಧರ್ಮ'ವನ್ನು ನಾಶಮಾಡಲು ಬಯಸುತ್ತದೆ ಎಂದು ಹೇಳಿದರು.
"ಕೆಲವು ಗುಂಪುಗಳು ದೇಶ ಹಾಗೂ ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿವೆ... ಅವರು ಒಟ್ಟಾಗಿ INDI ಮೈತ್ರಿಯನ್ನು ರಚಿಸಿದ್ದಾರೆ. ಅವರು ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಗುಪ್ತ ಕಾರ್ಯಸೂಚಿಯನ್ನು ಕೂಡ ನಿರ್ಧರಿಸಿದ್ದಾರೆ. INDI ಮೈತ್ರಿಯು 'ಸನಾತನ ಸಂಸ್ಕೃತಿ ಯನ್ನು ಕೊನೆಗೊಳಿಸುವ ನಿರ್ಣಯದೊಂದಿಗೆ ಬಂದಿದೆ’’ ಎಂದು ಅವರು ಹೇಳಿದರು.
ಇಂದು ಅವರು ಮುಕ್ತವಾಗಿ ಸನಾತನವನ್ನು ಗುರಿ ಮಾಡುತ್ತಿದ್ದಾರೆ. ನಾಳೆ ಅವರು ನಮ್ಮ ಮೇಲೆ ದಾಳಿ ಹೆಚ್ಚಿಸಲಿದ್ದಾರೆ. ದೇಶಾದ್ಯಂತವಿರುವ ಸನಾತನಿಯರು ಹಾಗೂ ನಮ್ಮ ದೇಶವನ್ನು ಪ್ರೀತಿಸುವವರು ಎಚ್ಚರಿಕೆಯಿಂದಿರಬೇಕು. ನಾವು ಇಂತಹ ಜನರನ್ನು ತಡೆಯಬೇಕಾಗಿದೆ ಎಂದು ಪ್ರಧಾನಿ ಕರೆ ಕೊಟ್ಟರು.