ಟಿಕೆಟ್ ಬುಕ್ ಮಾಡಿದ ನಂತರವೂ ಪ್ರಯಾಣ ದಿನ ಬದಲಾವಣೆಗೆ ಅವಕಾಶ ನೀಡಲು ರೈಲ್ವೆ ಇಲಾಖೆ ಚಿಂತನೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಟಿಕೆಟ್ ಬುಕ್ ಮಾಡಿದ ನಂತರವೂ ಪ್ರಯಾಣಿಕರು ತಮ್ಮ ಪ್ರಯಾಣ ದಿನ ಬದಲಿಸಲು ಅವಕಾಶ ನೀಡುವ ನಿಯಮಗಳ ಜಾರಿಗೆ ಭಾರತೀಯ ರೈಲ್ವೆ ಇಲಾಖೆ ಪರಿಶೀಲನೆ ನಡೆಸುತ್ತಿದೆ.
ಈವರೆಗೆ ಒಂದು ಬಾರಿ ರೈಲ್ವೆ ಟಿಕೆಟ್ ಬುಕ್ ಮಾಡಿದರೆ ಪ್ರಯಾಣ ದಿನಾಂಕ ಬದಲಾವಣೆಗೆ ಅವಕಾಶ ಇರಲಿಲ್ಲ. ಟಿಕೆಟ್ ರದ್ದುಗೊಳಿಸಿ ಹೊಸ ಬುಕ್ಕಿಂಗ್ ಮಾಡಬೇಕಿತ್ತು. ಆದರೆ ಹೊಸ ನಿಯಮ ಜಾರಿಗೆ ಬಂದರೆ ಪ್ರಯಾಣ ದಿನಾಂಕ ಬದಲಿಸಲು ಅವಕಾಶ ದೊರೆಯಲಿದೆ. ಪ್ರಯಾಣ ದಿನಾಂಕ ಬದಲಿಸುವವರು ಯಾವುದೇ ಹೆಚ್ಚು ಶುಲ್ಕ ತೆರಬೇಕಿಲ್ಲ. ಬುಕ್ಕಿಂಗ್ ರದ್ದತಿ ವೇಳೆ ಆಗುವ ಹಣ ಕಡಿತವೂ ಇಲ್ಲಿ ಆಗುವುದಿಲ್ಲ.
ಮುಂದಿನ ವರ್ಷದ ಜನವರಿಯಲ್ಲಿ ಹೊಸ ನಿಯಮ ಜಾರಿಗೆ ತರುವ ನಿರೀಕ್ಷೆಯಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕ್ರಮ ಜಾರಿಗೆ ಬಂದರೆ ರೈಲ್ವೆ ಪ್ರಯಾಣವು ಮತ್ತಷ್ಟು ಅನುಕೂಲಕರ ಮತ್ತು ಪ್ರಯಾಣಿಕ ಸ್ನೇಹಿಯಾಗಲಿದೆ.
ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ರೈಲು ನಿರ್ಗಮನಕ್ಕೆ 48 ರಿಂದ 12 ಗಂಟೆಗಳ ಮೊದಲು ದೃಢಪಡಿಸಿದ ಟಿಕೆಟ್ ಅನ್ನು ರದ್ದುಗೊಳಿಸುವುದರಿಂದ ದರದಲ್ಲಿ ಶೇಕಡಾ 25 ರಷ್ಟು ಕಡಿತವಾಗುತ್ತದೆ. ನಿರ್ಗಮನಕ್ಕೆ 12 ರಿಂದ 4 ಗಂಟೆಗಳ ಮೊದಲು ರದ್ದತಿಗೆ ಶುಲ್ಕ ಹೆಚ್ಚಾಗುತ್ತದೆ.