×
Ad

ಭಾರತೀಯ ಪಡೆಗಳು ಮಾಲ್ದೀವ್ಸ್‌ನ್ನು ತೊರೆಯವುದು ಅಗತ್ಯ: ನಿಯೋಜಿತ ಅಧ್ಯಕ್ಷ ಮುಹಮ್ಮದ್ ಮುಯಿಜು

Update: 2023-10-27 15:27 IST

ಮುಹಮ್ಮದ್ ಮುಯಿಜು (Photo credit: bloomberg.com) 

ಹೊಸದಿಲ್ಲಿ: ಮಾಲ್ದೀವ್ಸ್ ಸಂಪೂರ್ಣವಾಗಿ ಸ್ವತಂತ್ರವಾಗಿರಲು ಬಯಸುತ್ತದೆ ಮತ್ತು ದ್ವೀಪರಾಷ್ಟ್ರದಲ್ಲಿರುವ ಭಾರತೀಯ ಪಡೆಗಳನ್ನು ದೇಶವನ್ನು ತೊರೆಯುವಂತೆ ಸೂಚಿಸಲಿದೆ ಎಂದು ನಿಯೋಜಿತ ಅಧ್ಯಕ್ಷ ಮುಹಮ್ಮದ್ ಮುಯಿಜು ಹೇಳಿದ್ದಾರೆ. ಈ ಪ್ರದೇಶದ ಮೇಲೆ ಪ್ರಭಾವವನ್ನು ಹೊಂದಿರಲು ಭಾರತ ಮತ್ತು ಚೀನಾ ಪೈಪೋಟಿಯಲ್ಲಿರುವಾಗಲೇ ಮುಯಿಜು ಅವರ ಈ ಹೇಳಿಕೆ ಹೊರಬಿದ್ದಿದೆ.

ಬಿರುಸಿನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಯಿಜು, ಹಾಲಿ ಅಧ್ಯಕ್ಷ ಇಬ್ರಾಹಿಂ ಸೋಲಿಯವರು ಮಾಲ್ದೀವ್ಸ್‌ನ ವ್ಯವಹಾರಗಳ ಮೇಲೆ ಭಾರತದ ಮುಕ್ತ ನಿಯಂತ್ರಣಕ್ಕೆ ಅವಕಾಶ ನೀಡಿದ್ದಾರೆ ಮತ್ತು ಭಾರತೀಯ ಯೋಧರು ಇಲ್ಲಿ ನೆಲೆಸಲು ಅವಕಾಶ ನೀಡುವ ಮೂಲಕ ದೇಶದ ಸಾರ್ವಭೌಮತ್ವವನ್ನು ಶರಣಾಗಿಸಿದ್ದಾರೆ ಎಂದು ಆರೋಪಿಸಿದ್ದರು.

ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಮುಯಿಜು Bloomberg TV ಗೆ ನೀಡಿದ ಸಂದರ್ಶನದಲ್ಲಿ, ಇದು ಇಲ್ಲಿ ಭಾರತೀಯ ವಿದೇಶಿ ಮಿಲಿಟರಿಯ ಉಪಸ್ಥಿತಿಯಾಗಿದೆ. ಪಡೆಗಳು ಯಾವುದೇ ದೇಶಕ್ಕೆ ಸೇರಿದ್ದಾಗಿದ್ದರೂ ತನ್ನ ಪ್ರತಿಕ್ರಿಯೆ ಇದೇ ಆಗಿರುತ್ತಿತ್ತು ಎಂದು ಹೇಳಿದರು.

ಮಾಲ್ದೀವ್ಸ್‌ನಲ್ಲಿಯ ಭಾರತ ಪ್ರಾಯೋಜಿತ ರಾಡಾರ್ ಕೇಂದ್ರಗಳು ಮತ್ತು ಕಣ್ಗಾವಲು ವಿಮಾನಗಳನ್ನು ಸುಮಾರು 70 ಭಾರತೀಯ ಸೇನಾ ಸಿಬ್ಬಂದಿಗಳು ನಿರ್ವಹಿಸುತ್ತಿದ್ದಾರೆ. ಭಾರತೀಯ ಯುದ್ಧನೌಕೆಗಳು ಮಾಲ್ದೀವ್ಸ್‌ನ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತುಕಾರ್ಯದಲ್ಲಿ ನೆರವಾಗುತ್ತಿವೆ.

ಭಾರತೀಯ ಮಿಲಿಟರಿ ಉಪಸ್ಥಿತಿಯನ್ನು ಹಿಂದೆಗೆದುಕೊಳ್ಳುವ ಕುರಿತು ತಾನೀಗಾಗಲೇ ಭಾರತ ಸರಕಾರದೊಂದಿಗೆ ಮಾತುಕತೆಗಳನ್ನು ಆರಂಭಿಸಿದ್ದೇನೆ ಮತ್ತು ಈ ಮಾತುಕತೆಗಳು ಈಗಾಗಲೇ ತುಂಬ ಯಶಸ್ವಿಯಾಗಿವೆ ಎಂದು ಹೇಳಿದ ಮುಯಿಜು,‘ಪರಸ್ಪರ ಲಾಭದಾಯಕ ದ್ವಿಪಕ್ಷೀಯ ಸಂಬಂಧವನ್ನು ನಾವು ಬಯಸುತ್ತೇವೆ’ ಎಂದರು.

ಭಾರತೀಯ ಯೋಧರ ಬದಲಿಗೆ ಇತರ ದೇಶಗಳ ಸೈನಿಕರನ್ನು ನಿಯೋಜಿಸುವುದಿಲ್ಲ. ಮಿಲಿಟರಿ ಸಿಬ್ಬಂದಿಗಳನ್ನು ಹಿಂದೆಗೆದುಕೊಳ್ಳುವಂತೆ ಭಾರತವನ್ನು ಕೇಳಿಕೊಂಡಿರುವುದು ತಮ್ಮ ಮಿಲಿಟರಿ ಸಿಬ್ಬಂದಿಗಳನ್ನು ಇಲ್ಲಿಗೆ ಕರೆತರಲು ಚೀನಾ ಅಥವಾ ಇನ್ಯಾವುದೇ ದೇಶಕ್ಕೆ ತಾನು ಅವಕಾಶ ನೀಡಲಿದ್ದೇನೆ ಎಂದು ಯಾವುದೇ ರೀತಿಯಲ್ಲಿಯೂ ಸೂಚಿಸುವುದಿಲ್ಲ ಎಂದರು ಮುಯಿಜು ತಿಳಿಸಿದರು.

ಮುಯಿಜು ಅವರ ಗೆಲುವು ಆಯಕಟ್ಟಿನ ಹಿಂದು ಮಹಾಸಾಗರದ ಮೇಲೆ ಪ್ರಭಾವಕ್ಕಾಗಿ ಭಾರತ ಮತ್ತು ಚೀನಾ ನಡುವಿನ ಹಗ್ಗ ಜಗ್ಗಾಟವನ್ನು ಹೆಚ್ಚಿಸಿದೆ. ಮಾಲ್ದೀವ್ಸ್‌ನಲ್ಲಿಯ ಈವರೆಗಿನ ಸರಕಾರಗಳು ಭಾರತ ಅಥವಾ ಚೀನಾ ಪರ ಒಲುವು ಹೊಂದಿದ್ದವು. ಪರಸ್ಪರ ಪೈಪೋಟಿಗಿಳಿದಿರುವ ಉಭಯ ದೇಶಗಳು ಮಾಲ್ದೀವ್ಸ್‌ನಲ್ಲಿ ಮೂಲಸೌಕರ್ಯಗಳ ನವೀಕರಣ ಮತ್ತು ಅದಕ್ಕೆ ಸಾಲ ನೀಡಿಕೆಗಾಗಿ ಭಾರೀ ಹೂಡಿಕೆಯನ್ನು ಮಾಡಿವೆ.

ಅಮೆರಿಕ ಮತ್ತು ಜಪಾನ್, ಆಸ್ಟ್ರೇಲಿಯಗಳಂತಹ ಅದರ ಮಿತ್ರದೇಶಗಳು ಹೆಚ್ಚು ಪ್ರಬಲಗೊಳ್ಳುತ್ತಿರುವ ಚೀನಾವನ್ನು ಏಕಾಂಗಿಯಾಗಿಸಲು ಪ್ರಯತ್ನಿಸುತ್ತಿವೆ ಮತ್ತು ಭಾರತವನ್ನು ಪ್ರದೇಶದಲ್ಲಿ ಚೀನಾಕ್ಕೆ ಪ್ರಬಲ ಪ್ರತಿಸ್ಪರ್ಧಿಯನ್ನಾಗಿ ಬೆಂಬಲಿಸಲು ಮತ್ತು ಏಷ್ಯಾದಲ್ಲಿ ತಮ್ಮ ಪ್ರಮುಖ ಪಾಲುದಾರನನ್ನಾಗಿಸಲು ಭಾರೀ ಹೂಡಿಕೆಯನ್ನು ಮಾಡಿವೆ. ಮುಯಿಜು ಅವರ ಪೂರ್ವಾಧಿಕಾರಿ ಸೋಲಿ ತನ್ನ ದೇಶವನ್ನು ಭಾರತಕ್ಕೆ ನಿಕಟವಾಗಿಸಿದ್ದು, ಈ ಪ್ರಯತ್ನಗಳು ಫಲ ನೀಡುತ್ತಿರುವಂತೆ ಕಂಡು ಬಂದಿತ್ತು.

ಮುಯಿಜು ಈಗ ಭಾರತದ ಪಡೆಗಳನ್ನು ವಾಪಸ್ ಕಳುಹಿಸುವ ಮತ್ತು ಅದರೊಂದಿಗಿನ ವ್ಯಾಪಾರ ಅಸಮತೋಲನವನ್ನು ನಿವಾರಿಸುವ ಮೂಲಕ ಪಥ ಬದಲಾವಣೆಯ ಭರವಸೆಯನ್ನು ನೀಡಿದ್ದಾರೆ.

‘ನಾವು ಎಲ್ಲ ದೇಶಗಳಿಂದ ನೆರವು ಮತ್ತು ಸಹಕಾರವನ್ನು ಬಯಸುತ್ತೇವೆ ’ ಎಂದು ಹೇಳಿದ ಮುಯಿಜು,ಚುನಾವಣೆಯು ಭಾರತ ಅಥವಾ ಚೀನಾದೊಂದಿಗೆ ನಿಕಟ ಸಂಬಂಧ ಕುರಿತು ಜನಾಭಿಪ್ರಾಯ ಸಂಗ್ರಹವಾಗಿತ್ತು ಎಂಬ ಅಭಿಪ್ರಾಯವನ್ನು ತಳ್ಳಿ ಹಾಕಿದರು.

ಬಹುಕಾಲದಿಂದ ಪ್ರಾದೇಶಿಕ ಶಕ್ತಿಯ ಪಾತ್ರವನ್ನು ನಿರ್ವಹಿಸಿರುವ ಭಾರತವು,ನೂತನ ಮಾಲ್ದೀವ್ಸ್ ಸರಕಾರದೊಂದಿಗೆ ಕಾರ್ಯ ನಿರ್ವಹಿಸುವುದು ತನ್ನ ಉದ್ದೇಶವಾಗಿದೆ ಎಂದು ಹೇಳಿದೆ. ಅದು ಮುಯಿಜು ಅವರ ನಡೆಗಳನ್ನು ಎಚ್ಚರಿಕೆಯಿಂದ ನೋಡುತ್ತಿದೆ.

‘ನೂತನ ಆಡಳಿತದೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದನ್ನು ಮತ್ತು ನಮ್ಮ ಸಂಬಂಧಗಳನ್ನು ಇನ್ನಷ್ಟು ಹೆಚ್ಚಿಸಲು ಮಾರ್ಗೋಪಾಯಗಳ ಬಗ್ಗೆ ಚರ್ಚಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ ’ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಕಳೆದ ವಾರ ಸುದ್ದಿಗಾರರಿಗೆ ತಿಳಿಸಿದ್ದರು.

ಎಲ್ಲ ದೇಶಗಳೊಂದಿಗೆ ನಿಕಟವಾಗಿ ಕಾರ್ಯಾಚರಿಸಲು ತಾನು ಉದ್ದೇಶಿಸಿದ್ದೇನೆ. ಮಾಲ್ದೀವ್ಸ್ ಪುಟ್ಟ ದೇಶವಾಗಿದೆ ಮತ್ತು ಅದು ದೊಡ್ಡ ದೇಶಗಳ ನಡುವಿನ ಭೌಗೋಳಿಕ ರಾಜಕೀಯ ಪೈಪೋಟಿಯಲ್ಲಿ ಯಾವುದೇ ಪಕ್ಷ ವಹಿಸುವುದಿಲ್ಲ ಎಂದು ಮುಯಿಜು ಹೇಳಿದರು.

ಮುಯಿಜು ನ.15ರಂದು ಮಾಲ್ದೀವ್ಸ್‌ನ ನೂತನ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News