ಸರಕಾರದ ನೀತಿಯಲ್ಲಿ ತಿದ್ದುಪಡಿ: ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆಲ್ಲುವ ಕಿರಿಯ ಅತ್ಲಿಟ್‌ಗಳಿಗೆ ಇನ್ನು ಮುಂದೆ ನಗದು ಬಹುಮಾನವಿಲ್ಲ!
ಸಾಂದರ್ಭಿಕ ಚಿತ್ರ (credit: Grok)
ಹೊಸದಿಲ್ಲಿ: ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆಲ್ಲುವ ಕಿರಿಯ ಅಥ್ಲಿಟ್‌ಗಳು ಇನ್ನು ಮುಂದೆ ಸರಕಾರದಿಂದ ನಗದು ಬಹುಮಾನಗಳನ್ನು ಪಡೆಯುವುದಿಲ್ಲ. ಫೆ.1ರಿಂದ ಜಾರಿಗೊಂಡಿರುವ ಕ್ರೀಡಾ ಸಚಿವಾಲಯದ ಈ ಪ್ರಮುಖ ನೀತಿ ಬದಲಾವಣೆಯು ಡೋಪಿಂಗ್ ಅಥವಾ ಉದ್ದೀಪನ ದ್ರವ್ಯ ಸೇವನೆ ಮತ್ತು ವಯಸ್ಸಿನ ವಂಚನೆಯ ಅವಳಿ ಪಿಡುಗುಗಳನ್ನು ಹತ್ತಿಕ್ಕುವ ಜೊತೆಗೆ ಯುವಕರ ‘ಪದಕಗಳನ್ನು ಗೆಲ್ಲುವ ಹಸಿವನ್ನು ಜೀವಂತವಾಗಿರಿಸುವ’ ಗುರಿಯನ್ನು ಹೊಂದಿದೆ ಎಂದು indianexpress.com ವರದಿ ಮಾಡಿದೆ.
ಹಳೆಯ ಪದ್ಧತಿಯಂತೆ ಜ್ಯೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದವರಿಗೆ ಸುಮಾರು 13 ಲಕ್ಷ ರೂ. ಮತ್ತು ಏಶ್ಯನ್ ಅಥವಾ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಅಗ್ರಸ್ಥಾನಿಗಳಿಗೆ ಐದು ಲಕ್ಷ ರೂ.ಗಳ ನಗದು ಬಹುಮಾನ ಲಭಿಸುತ್ತಿತ್ತು.
‘ಭಾರತವು ಮಾತ್ರ ಜ್ಯೂನಿಯರ್ ಚಾಂಪಿಯನ್‌ಶಿಪ್‌ಗಳಿಗೆ ಅತಿಯಾದ ಪ್ರಾಮುಖ್ಯ ನೀಡುತ್ತಿದೆ ಎನ್ನುವುದನ್ನು ನಾವು ಗಮನಿಸಿದ್ದೇವೆ. ಪರಿಣಾಮವಾಗಿ ಕ್ರೀಡಾಪಟುಗಳು ಈ ಹಂತದಲ್ಲಿ ಎಷ್ಟೊಂದು ಶ್ರಮಿಸುತ್ತಾರೆಂದರೆ ಅವರು ಉನ್ನತ ಸ್ಥಾನವನ್ನು ತಲುಪುವ ವೇಳೆಗೆ ಪೂರ್ತಿಯಾಗಿ ದಣಿದಿರುತ್ತಾರೆ ಅಥವಾ ಇನ್ನಷ್ಟು ಸಾಧಿಸುವ ಹಸಿವನ್ನು ಕಳೆದುಕೊಂಡಿರುತ್ತಾರೆ’ ಎಂದು ಕ್ರೀಡಾ ಸಚಿವಾಲಯದ ಅಧಿಕಾರಿಯೋರ್ವರು ಹೇಳಿದರು.
ಹಿರಿಯ ಕ್ರೀಡಾಪಟುಗಳಿಗಾಗಿ ಬಹುಮಾನ ನೀತಿಯನ್ನೂ ಪರಿಷ್ಕರಿಸಲಾಗಿದೆ. ಸಚಿವಾಲಯವು ಬಹುಮಾನಗಳ ಪಟ್ಟಿಯಿಂದ ಕಾಮನ್ವೆಲ್ತ್ ಚಾಂಪಿಯನ್‌ಶಿಪ್ ಮತ್ತು ದಕ್ಷಿಣ ಏಶ್ಯನ್ ಕ್ರೀಡೆಗಳನ್ನು ತೆಗೆದುಹಾಕಿದೆ. ಅಂತರರಾಷ್ಟ್ರೀಯ ಮಾಸ್ಟರ್ ಅಥವಾ ಗ್ರ್ಯಾಂಡ್ ಮಾಸ್ಟರ್ ಗೌರವಗಳನ್ನು ಗೆದ್ದ ಚೆಸ್ ಆಟಗಾರರಿಗೂ ಇನ್ನು ಮುಂದೆ ಪ್ರೋತ್ಸಾಹಧನವನ್ನು ನೀಡಲಾಗುವುದಿಲ್ಲ.
ಕಳೆದ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೂಟರ್ ಮನು ಭಾಕರ್ ಅವರು ಎರಡು ಕಂಚಿನ ಪದಕಗಳನ್ನು ಗೆದ್ದು ಅಭೂತಪೂರ್ವ ಸಾಧನೆಯನ್ನು ಮಾಡಿರುವ ಹಿನ್ನೆಲೆಯಲ್ಲಿ ಕ್ರೀಡಾ ಸಚಿವಾಲಯದ ನಿಲುವು ಬದಲಾಗಿದ್ದು,ಇನ್ನು ಮುಂದೆ ಕ್ರೀಡಾಪಟುಗಳು ಮತ್ತು ಅವರ ತರಬೇತಿದಾರರು ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೆಲ್ಲುವ ಪ್ರತಿ ಪದಕಕ್ಕೂ ಬಹುಮಾನವನ್ನು ನೀಡಲಾಗುವುದು. ಪದಕ ವಿಜೇತರು ತರಬೇತಿ ಪಡೆದಿರುವ ಅಖಾಡಾ ಅಥವಾ ಅಕಾಡೆಮಿ ಕೂಡ ಬಹುಮಾನಗಳಿಗೆ ಅರ್ಹವಾಗಿರುತ್ತದೆ. ಕ್ರೀಡಾಪಟುವಿನ ‘ಸಂಗಾತಿ,ತಂದೆ,ತಾಯಿ,ಸಹೋದರ ಮತ್ತು ಸಹೋದರಿ’ ಬಹುಮಾನವನ್ನು ಸ್ವೀಕರಿಸುವುದನ್ನು ನಿಷೇಧಿಸಿದ್ದ ನಿಬಂಧನೆಯನ್ನು ಪರಿಷ್ಕೃತ ನೀತಿಯಲ್ಲಿ ಕೈಬಿಡಲಾಗಿದೆ.
ಈ ಎಲ್ಲ ವರ್ಷಗಳಲ್ಲಿ ಕ್ರೀಡಾಪಟುಗಳು ಮತ್ತು ಅವರ ತರಬೇತಿದಾರರಿಂದ ವಯಸ್ಸಿನ ವಂಚನೆ ಮತ್ತು ಡೋಪಿಂಗ್ ಅಪರಾಧಗಳನ್ನು ಪ್ರಚೋದಿಸಲು ನಗದು ಬಹುಮಾನಗಳು ಒಂದು ಕಾರಣವೆಂದು ಪರಿಗಣಿಸಲಾಗಿದೆ.
ಜ.13ರ ನ್ಯಾಷನಲ್ ಆ್ಯಂಟಿ-ಡೋಪಿಂಗ್ ಏಜೆನ್ಸಿಯ ದತ್ತಾಂಶಗಳ ಪ್ರಕಾರ 2022ರಿಂದ ಭಾರತದಲ್ಲಿ ಡೋಪಿಂಗ್ ಅಪರಾಧಿಗಳ ಪೈಕಿ ಶೇ.10ಕ್ಕೂ(204ರಲ್ಲಿ 22) ಹೆಚ್ಚಿನವರು ಅಪ್ರಾಪ್ತ ವಯಸ್ಕರಾಗಿದ್ದಾರೆ.
ತಮ್ಮ ವಯಸ್ಸಿನ ವಿಷಯದಲ್ಲಿ ವಂಚಿಸುವ ಕ್ರೀಡಾಪಟುಗಳ ಸಂಖ್ಯೆಯ ಮೇಲೆ ನಿಗಾಯಿಡುವ ಯಾವುದೇ ಕೇಂದ್ರೀಯ ವ್ಯವಸ್ಥೆ ಇಲ್ಲವಾದರೂ,ಕಳೆದ ಕೆಲವು ವರ್ಷಗಳಲ್ಲಿ ಈ ಆರೋಪದಲ್ಲಿ ನೂರಾರು ಕ್ರೀಡಾಪಟುಗಳನ್ನು ಅಮಾನತುಗೊಳಿಸಲಾಗಿದೆ,ಹಲವರು ಬಲೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.
ಕ್ರೀಡಾಪಟುಗಳು ಅನ್ಯಾಯದ ವಿಧಾನಗಳನ್ನು ಅನುಸರಿಸಲು ನಗದು ಪ್ರಶಸ್ತಿಗಳ ಆಮಿಷ ಒಂದು ಕಾರಣ ಎಂದು ಹೇಳಬಹುದು. ಅವರಲ್ಲಿ ಹೆಚ್ಚಿನವರು ಬಡತನದ ಹಿನ್ನೆಲೆಯಿಂದ ಬಂದಿರುವುದರಿಂದ ಇದು ಅವರ ಪಾಲಿಗೆ ಹೆಚ್ಚು ಅಪಾಯದ ಮತ್ತು ಹೆಚ್ಚು ಪ್ರತಿಫಲದ ಪ್ರಕರಣವಾಗಿದೆ ಎಂದು ಇನ್ನೋರ್ವ ಅಧಿಕಾರಿ ಹೇಳಿದರು.
ಈ ನಡುವೆ ಆಲ್-ಇಂಗ್ಲಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಅಥವಾ ಚೆಸ್‌ನಲ್ಲಿ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗಳಂತಹ ಸ್ಪರ್ಧೆಗಳಲ್ಲಿ ವಿಜೇತ ಕ್ರೀಡಾಪಟುಗಳಿಗೆ ಅಲ್ಲಿಯ ಸ್ಪರ್ಧೆಯ ಉನ್ನತ ಗುಣಮಟ್ಟವನ್ನು ಪರಿಗಣಿಸಿ ವಿಶ್ವ ಚಾಂಪಿಯನ್‌ಶಿಪ್ ಸಮಾನವಾದ ನಗದು ಬಹುಮಾನಗಳನ್ನು ನೀಡಲಾಗುತ್ತದೆ.