×
Ad

ರನ್ ವೇ ಪ್ರವೇಶಿಸಲು ಕಾಯುತ್ತಿದ್ದ ಏರ್ ಇಂಡಿಯಾ ವಿಮಾನದ ರೆಕ್ಕೆಗೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ

Update: 2024-03-27 17:51 IST

Photo : NDTV

ಕೋಲ್ಕತಾ : ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ದರ್ಭಾಂಗಕ್ಕೆ ತೆರಳುತ್ತಿದ್ದ ಟ್ಯಾಕ್ಸಿ ವೇಯಲ್ಲಿದ್ದ ಇಂಡಿಗೋ ವಿಮಾನ, ರನ್‌ವೇ ಪ್ರವೇಶಿಸಲು ಅನುಮತಿಗಾಗಿ ಕಾಯುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ರೆಕ್ಕೆಯ ಒಂದು ಭಾಗ ರನ್‌ವೇ ಮೇಲೆ ಬಿದ್ದಿದ್ದು, ಇಂಡಿಗೋ ವಿಮಾನದ ರೆಕ್ಕೆ ನಜ್ಜುಗುಜ್ಜಾಗಿದೆ. ಇಂಡಿಗೋ ವಿಮಾನದಲ್ಲಿ ನಾಲ್ಕು ಶಿಶುಗಳು ಸೇರಿದಂತೆ 135 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(DGCA) ಇಂಡಿಗೋದ ಪೈಲಟ್‌ಗಳಿಬ್ಬರನ್ನೂ ಅಮಾನತು ಮಾಡಿ ವಿವರವಾದ ತನಿಖೆಗೆ ಆದೇಶಿಸಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

"ನಾವು ಈ ವಿಷಯದ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದ್ದೇವೆ ಮತ್ತು ಇಂಡಿಗೋ ಏರ್‌ಲೈನ್ಸ್‌ನ ಇಬ್ಬರೂ ಪೈಲಟ್‌ಗಳನ್ನು ಅಮಾನತು ಮಾಡಲಾಗಿದೆ. ತನಿಖೆಯ ಸಮಯದಲ್ಲಿ ಗ್ರೌಂಡ್ ಸ್ಟಾಫ್ ಗಳನ್ನೂ ವಿಚಾರಣೆ ಮಾಡಲಾಗುವುದು. ಎರಡೂ ವಿಮಾನಗಳನ್ನು ವಿವರವಾದ ತಪಾಸಣೆಗಾಗಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ" ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಟ್ಯಾಕ್ಸಿ ವೇಯಲ್ಲಿದ್ದ ಇಂಡಿಗೋ ವಿಮಾನ ಮತ್ತು ಇನ್ನೊಂದು ವಿಮಾನವನ್ನು ಸ್ಪರ್ಷಿಸಿರುವ ಘಟನೆ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ವರದಿಯಾಗಿದೆ. ವಿಮಾನವು ತಪಾಸಣೆ ಮತ್ತು ಪ್ರೋಟೋಕಾಲ್ ಪ್ರಕಾರ ಅಗತ್ಯ ಕ್ರಮಕ್ಕಾಗಿ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದೆ," ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ. ಸಂಸ್ಥೆಯು ಡಿಜಿಸಿಎಗೆ ವರದಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಈ ಘಟನೆಯಿಂದ ಕೋಲ್ಕತ್ತಾ ಮತ್ತು ದರ್ಭಾಂಗ ನಡುವಿನ ಇಂಡಿಗೋ ವಿಮಾನ 6E 6152 ವಿಳಂಬವಾಯಿತು.ಎಲ್ಲಾ ಪ್ರಯಾಣಿಕರಿಗೆ ಉಪಹಾರ ನೀಡಿ ಮತ್ತು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಯಿತು ಎಂದು ಸಂಸ್ಥೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News