ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದ ನವದಂಪತಿ ನಾಪತ್ತೆ ಪ್ರಕರಣಕ್ಕೆ ತಿರುವು : ಕೊಲೆಗೈದ ಸ್ಥಿತಿಯಲ್ಲಿ ಪತಿಯ ಮೃತದೇಹ ಪತ್ತೆ!
ಇಂದೋರ್: ಮಧ್ಯಪ್ರದೇಶದ ಇಂದೋರ್ ಮೂಲದ ನವದಂಪತಿ ರಾಜಾ ರಘುವಂಶಿ ಮತ್ತು ಸೋನಂ ಮೇಘಾಲಯದ ಶಿಲ್ಲಾಂಗ್‌ನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದೀಗ ರಾಜಾ ರಘುವಂಶಿ ಅವರ ಮೃತದೇಹ ಪತ್ತೆಯಾಗಿದ್ದು, ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ವಿವಾಹದ ಬಳಿಕ ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದ ರಾಜಾ ರಘುವಂಶಿ ಮತ್ತು ಸೋನಂ ಮೇ 23ರಂದು ಶಿಲ್ಲಾಂಗ್‌ನಲ್ಲಿ ನಾಪತ್ತೆಯಾಗಿದ್ದರು. ಇದಾದ ಒಂದು ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು.
ಶಿಲ್ಲಾಂಗ್ ಪೊಲೀಸರು ಕಳೆದ 11 ದಿನಗಳಿಂದ ನವದಂಪತಿಗೆ ಹುಡುಕಾಟ ನಡೆಸುತ್ತಿದ್ದರು. ಇದೀಗ ಪೊಲೀಸರು ರಾಜಾ ರಘುವಂಶಿ ಅವರ ಮೃತದೇಹವನ್ನು ಆಳವಾದ ಕಂದಕದಲ್ಲಿ ಪತ್ತೆ ಹಚ್ಚಿದ್ದಾರೆ. ಮೇಘಾಲಯದಲ್ಲಿ ಭಾರೀ ಸುದ್ದಿಯಾಗಿದ್ದ ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ʼರಾಜಾ ರಘುವಂಶಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳದಲ್ಲಿ ಅವರ ಮೊಬೈಲ್ ಫೋನ್ ದೊರೆತಿದೆʼ ಎಂದು ತಿಳಿಸಿದ್ದಾರೆ.
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಶ್ಯಾಮ್ ಪ್ರತಿಕ್ರಿಯಿಸಿ, ಘಟನಾ ಸ್ಥಳದಿಂದ ನಾವು ಮೃತ ವ್ಯಕ್ತಿಯ ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಆಯುಧವನ್ನು ವಶಪಡಿಸಿಕೊಂಡಿದ್ದೇವೆ. ಇದು ಕೊಲೆ ಕೃತ್ಯ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ರಾಜಾ ಅವರ ಮೃತದೇಹ ಪತ್ತೆಯಾದರೂ ಸೋನಂ ಅವರ ಯಾವುದೇ ಸುಳಿವು ಸಿಕ್ಕಿಲ್ಲ. 6 ಪೊಲೀಸ್ ತಂಡಗಳು ಅವರಿಗಾಗಿ ಹುಡುಕಾಟ ನಡೆಸುತ್ತಿವೆ. ಕಂದಕ ಮತ್ತು ದಟ್ಟವಾದ ಮಂಜಿನಿಂದಾಗಿ ಸ್ಥಳದಲ್ಲಿ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.