×
Ad

ಇರಾನ್-ಇಸ್ರೇಲ್‌ ಯುದ್ಧ: ಭಾರತದ ಬಾಸ್ಮತಿಗೆ ಸಂಕಷ್ಟ

Update: 2025-06-21 20:38 IST

ಸಾಂದರ್ಭಿಕ ಚಿತ್ರ | PC : freepik.com

ಚಂಡೀಗಡ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿರುವ ಶೇ.26 ಸುಂಕದಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಬಾಸ್ಮತಿ ಅಕ್ಕಿ ರಫ್ತು ಮಾರುಕಟ್ಟೆಗೆ ಈಗ ನಡೆಯುತ್ತಿರುವ ಇಸ್ರೇಲ್- ಇರಾನ್ ಯುದ್ಧವು ಹೊಸ ಬಿಕ್ಕಟ್ಟನ್ನು ಸೃಷ್ಟಿಸಿದೆ. ರವಾನೆ ಸ್ಥಗಿತ, ಪಾವತಿ ವಿಳಂಬ, ಕುಸಿಯುತ್ತಿರುವ ಧಾರಣೆಗಳು ಹಾಗೂ ದೇಶೀಯವಾಗಿ ಮಿತಿಮೀರಿದ ಪೂರೈಕೆಯ ಭೀತಿ ಇವೆಲ್ಲಾ ಸಮಸ್ಯೆಗಳ ನಡುವೆ ಭಾರತೀಯ ಬಾಸ್ಮತಿ ಅಕ್ಕಿ ರಫ್ತುದಾರರು ಸಿಲುಕಿ ತೊಳಲಾಡುತ್ತಿದ್ದಾರೆ.

ಸೌದಿ ಆರೇಬಿಯದ ಆನಂತರ ಇರಾನ್, ಭಾರತದ ಬಾಸ್ಮತಿ ಅಕ್ಕಿಯ ಅತಿ ದೊಡ್ಡ ಆಮದುದಾರ ರಾಷ್ಟ್ರವಾಗಿದೆ. ಅದರಲ್ಲೂ ಬಾಸ್ಮತಿಯ ಸೆಲಾ (ಕುಚ್ಚಲು) ಪ್ರಭೇದಕ್ಕೆ ಇರಾನ್‌ನಲ್ಲಿ ಅಪಾರ ಬೇಡಿಕೆಯಿದೆ.

2023-24ರ ಹಣಕಾಸು ವರ್ಷದಲ್ಲಿ ಭಾರತದಿಂದ 59.42 ಲಕ್ಷ ಮೆಟ್ರಿಕ್ ಟನ್ (ಎಲ್‌ಎಂಟಿ) ಬಾಸ್ಮತಿ ಅಕ್ಕಿಯು ಇರಾನ್‌ ಗೆ ರಫ್ತಾಗಿತ್ತು. ಈ ಪೈಕಿ ಐದು ರಾಷ್ಟ್ರಗಳಿಗೆ ಅಂದರೆ ಇರಾನ್ ( 7 ಲಕ್ಷ ಮೆಟ್ರಿಕ್ ಟನ್), ಸೌದಿ ಆರೇಬಿಯ (11 ಲಕ್ಷ ಮೆಟ್ರಿಕ್ ಟನ್), ಇರಾಕ್ (8 ಲಕ್ಷ ಮೆಟ್ರಿಕ್ ಟನ್), ಯೆಮೆನ್ (3 ಲಕ್ಷ ಮೆಟ್ರಿಕ್ ಟನ್) ಹಾಗೂ ಅಮೆರಿಕ (3 ಲಕ್ಷ ಮೆಟ್ರಿಕ್ ಟನ್) ಅತಿ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಿತ್ತು.

ಈ ಅಭಿವೃದ್ಧಿಯು ಪಂಜಾಬ್ ಮೇಲೆ ತೀವ್ರವಾಗಿ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ. ಭಾರತದಲ್ಲಿ ಶೇ.40ರಷ್ಟು ಬಾಸ್ಮತಿ ಅಕ್ಕಿಯು ಪಂಜಾಬ್‌ ನಲ್ಲಿ ಉತ್ಪಾದನೆಯಾಗುತ್ತದೆ. ಹರ್ಯಾಣ ಮತ್ತಿತರ ರಾಜ್ಯಗಳು ಆನಂತರದ ಸ್ಥಾನಗಳಲ್ಲಿವೆ.

ಇಸ್ರೇಲ್- ಇರಾನ್ ಯುದ್ಧವು ಭಾರತದ ಬಾಸ್ಮತಿ ಅಕ್ಕಿ ರಫ್ತಿನ ಮೇಲೆ ತೀವ್ರ ಪರಿಣಾಮವನ್ನು ಬೀರಿದೆಯೆಂದು ಬಾಸ್ಮತಿ ಅಕ್ಕಿ ಗಿರಣಿದಾರರು ಹಾಗೂ ರಫ್ತುದಾರರ ಸಂಘದ ಉಪಾಧ್ಯಕ್ಷ ರಂಜಿತ್ ಸಿಂಗ್ ಜೊಸ್ಸಾನ್ ಹೇಳುತ್ತಾರೆ. ಕೆಲವು ದಿನಗಳ ಹಿಂದೆ ಇಸ್ರೇಲ್- ಇರಾನ್ ಯುದ್ಧವು ಭುಗಿಲೆದ್ದ ಆನಂತರ ಇರಾನ್‌ ಗೆ ಬಾಸ್ಮತಿ ಅಕ್ಕಿಯ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇರಾನ್‌ನ ಬಂದಾರ್ ಅಬ್ಬಾಸ್ ಬಂದರಿನ ಕಾರ್ಯಾಚರಣೆ ಸ್ಥಗಿತಗೊಂಡಿರುವುದರಿಂದ ಭಾರತದಿಂದ ರಫ್ತು ಮಾಡಲಾದ ಬಾಸ್ಮತಿ ಅಕ್ಕಿಯ ಹಲವಾರು ಸರಂಜಾಮುಗಳು ಅಲ್ಲಿ ಸಿಲುಕಿಕೊಂಡಿವೆ. ಬಾಸ್ಮತಿ ಅಕ್ಕಿಯನ್ನು ಸಾಗಿಸುತ್ತಿದ್ದ ಎರಡು ಹಡಗುಗಳು ಬಂದಾರ್ ಅಬ್ಬಾಸ್‌ ನಲ್ಲಿ ಲಂಗರು ಹಾಕಿದೆ. ಆದರೆ ಅದು ಸರಂಜಾಮು ಇಳಿಕೆಗಾಗಿ ಕಾಯುತ್ತಿದೆ ಎಂದವರು ಹೇಳಿದ್ದಾರೆ.

►ಭಾರತವು ಇರಾನ್‌ ಗೆ ಸುಮಾರು 10 ಲಕ್ಷ ಟನ್ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುತ್ತಿದ್ದು, ಇದು ಭಾರತದ ಜಾಗತಿಕ ಬಾಸ್ಮತಿ ರಫ್ತಿನ ಶೇ.15-16ರಷ್ಟಾಗಿದೆ. ಈಗ ಸುಮಾರು 3 ಸಾವಿರ ಕೋಟಿರೂ. ಮೌಲ್ಯದ ರಫ್ತು ಆದೇಶವು ತೂಗೂಯ್ಯಾಲೆಯಲ್ಲಿದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿಯಲ್ಲಿ ಏನೆಲ್ಲಾ ಬೆಳವಣಿಗೆಯಾಗಲಿದೆಯೆಂಬುದು ಯಾರಿಗೂ ತಿಳಿದಿಲ್ಲ. ಇರಾನ್‌ನಲ್ಲಿ ಬ್ಯಾಂಕಿಂಗ್ ಮೂಲಸೌಕರ್ಯ ವ್ಯವಸ್ಥೆಯು ಕುಸಿದುಬಿದ್ದಿದೆ. ಹೀಗಾಗಿ ಯಾವುದೇ ಹಣಕಾಸು ವಹಿವಾಟು ನಡೆಯುತ್ತಿಲ್ಲ. ನಾವೀಗ ಕೈಕಟ್ಟಿ ಕೂರಬೇಕಾದಂತಹ ಪರಿಸ್ಥಿತಿಯುಂಟಾಗಿದೆ

ರಂಜಿತ್ ಸಿಂಗ್ ಜೊಸ್ಸಾನ್

ಭಾರತೀಯ ಬಾಸ್ಮತಿ ಅಕ್ಕಿ ಗಿರಣಿದಾರರು ಹಾಗೂ

ರಫ್ತುದಾರರ ಸಂಘದ ಉಪಾಧ್ಯಕ್ಷ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News