×
Ad

ಚುನಾವಣಾ ಆಯೋಗ ಬಿಜೆಪಿಯ ಹಿಂಬಾಗಿಲ ಕಚೇರಿಯೆ?: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಕರ್ನಾಟಕದ ಮಾಹಿತಿ ದೊರೆಯದಂತೆ ಚುನಾವಣಾ ಆಯೋಗ ತಡೆಗೋಡೆ ನಿರ್ಮಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷ

Update: 2025-09-07 19:18 IST

ಮಲ್ಲಿಕಾರ್ಜುನ ಖರ್ಗೆ (Photo: PTI)

ಹೊಸದಿಲ್ಲಿ: ಕರ್ನಾಟಕದ ಅಳಂದ ವಿಧಾನಸಭಾ ಚುನಾವಣೆಯಲ್ಲಿ ನಡೆದಿದೆಯೆನ್ನಲಾದ ಚುನಾವಣಾ ಅಕ್ರಮದ ಕುರಿತ ಪ್ರಮುಖ ಮಾಹಿತಿಗಳು ದೊರೆಯದಂತೆ ಚುನಾವಣಾ ಆಯೋಗವು ತಡೆಗೋಡೆ ನಿರ್ಮಿಸುತ್ತಿದೆ ಎಂದು ರವಿವಾರ ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಬಿಜೆಪಿಯ ಮತಗಳ್ಳತನಕ್ಕೆ ಚುನಾವಣಾ ಆಯೋಗವೇನಾದರೂ ಹಿಂಬಾಗಿಲ ಕಚೇರಿಯಾಗಿದೆಯೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, 2023ರಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಅಳಂದ ವಿಧಾನಸಭಾ ಕ್ಷೇತ್ರದಿಂದ ಮತದಾರರ ಹೆಸರನ್ನು ತೆಗೆದು ಹಾಕುವ ಪ್ರಯತ್ನದ ಭಾಗವಾಗಿ ನಕಲಿ ಫಾರ್ಮ್ 7 ಸಲ್ಲಿಕೆಯಾಗಿತ್ತು ಎಂಬ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ, ಆರೋಪಿಗಳನ್ನು ಪತ್ತೆ ಹಚ್ಚಲು ಅಗತ್ಯವಾದ ಪ್ರಮುಖ ದಾಖಲೆಗಳನ್ನು ಒದಗಿಸಲು ಚುನಾವಣಾ ಆಯೋಗ ನಿರಾಕರಿಸುತ್ತಿರುವುದರಿಂದ, ಈ ಪ್ರಕರಣ ತಣ್ಣಗಾಗಿದೆ ಎಂದು ಆರೋಪಿಸಿದ್ದಾರೆ.

“ಈ ಹೊಂದಾಣಿಕೆಯನ್ನು ಅರ್ಥ ಮಾಡಿಕೊಳ್ಳಿ. ಮೇ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ, ಕಾಂಗ್ರೆಸ್ ಪಕ್ಷವು ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಮತದಾರರ ಹೆಸರನ್ನು ತೆಗೆದು ಹಾಕಿರುವುದನ್ನು ಬಯಲು ಮಾಡಿತ್ತು. ಫಾರ್ಮ್ 7 ಅನ್ನು ನಕಲು ಮಾಡುವ ನಾಜೂಕು ಕಾರ್ಯಾಚರಣೆಯ ಮೂಲಕ ಸಾವಿರಾರು ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗಿತ್ತು” ಎಂದು ಅವರು ದೂರಿದ್ದಾರೆ.

ಈ ಸಂಬಂಧ ಫೆಬ್ರವರಿ 2023ರಲ್ಲಿ ಪ್ರಕರಣ ದಾಖಲಿಸಲಾಗಿತ್ತು ಹಾಗೂ ತನಿಖೆಯಲ್ಲಿ 5,994 ನಕಲಿ ಅರ್ಜಿಗಳಿರುವುದು ಪತ್ತೆಯಾಗಿತ್ತು. ಇದು ಮತದಾರರ ಅಕ್ರಮ ನಡೆಸಲು ದೊಡ್ಡ ಮಟ್ಟದ ಪ್ರಯತ್ನ ನಡೆಸಲಾಗಿತ್ತು ಎಂಬ ಬಗ್ಗೆ ಸ್ಪಷ್ಟ ಪುರಾವೆ ಒದಗಿಸಿತ್ತು. ಬಳಿಕ ಕಾಂಗ್ರೆಸ್ ಸರಕಾರವು ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಸಿಐಡಿ ತನಿಖೆಗೆ ಆದೇಶಿಸಿತ್ತು ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

“ಈ ಮುನ್ನ, ನಕಲನ್ನು ಪತ್ತೆ ಹಚ್ಚಲು ಸ್ವಲ್ಪ ಮಟ್ಟಿನ ದಾಖಲೆಗಳನ್ನು ಹಂಚಿಕೊಂಡಿದ್ದ ಚುನಾವಣಾ ಆಯೋಗ, ಇದೀಗ ಪ್ರಮುಖ ಮಾಹಿತಿಗಳಿಗೆ ತಡೆಗೋಡೆ ನಿರ್ಮಿಸಿದೆ. ಆ ಮೂಲಕ, ಮತಗಳ್ಳತನದ ಹಿಂದಿರುವವರನ್ನು ಪರಿಣಾಮಕಾರಿಯಾಗಿ ರಕ್ಷಿಸುತ್ತಿದೆ” ಎಂದು ಅವರು ಆಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News