×
Ad

ಇಸ್ರೋ 100ನೇ ಮಿಷನ್ ನಲ್ಲಿ ತಾಂತ್ರಿಕದೋಷ; ಅಪೇಕ್ಷಿತ ಕಕ್ಷೆ ಸೇರಲು ವಿಫಲ

Update: 2025-02-03 07:30 IST

PC: x.com/isro

ಶ್ರೀಹರಿಕೋಟಾ: ಭಾರತದ ಬಾಹ್ಯಾಕಾಶ ಸಂಸ್ಥೆಯ ಬಹುನಿರೀಕ್ಷಿತ 100ನೇ ಮಿಷನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಎನ್ ವಿಎಸ್-02 ಉಪಗ್ರಹವನ್ನು ಅಪೇಕ್ಷಿತ ಕಕ್ಷೆಗೆ ಸೇರಿಸಲು ಸಾಧ್ಯವಾಗಿಲ್ಲ. ಮಿಷನ್ ನ ಥ್ರಸ್ಟರ್ ಗಳು ಸಿಡಿಯಲು ವಿಫಲವಾಗಿ ಈ ಸಮಸ್ಯೆ ಎದುರಾಗಿದೆ ಎಂದು ಇಸ್ರೋ ಪ್ರಕಟಿಸಿದೆ.

ಕಳೆದ ಬುಧವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ 100ನೇ ಮಿಷನ್ ಉಡಾಯಿಸಲಾಗಿತ್ತು. ಇದು ಭಾರತದ ಸ್ವಂತ ಬಾಹ್ಯಾಕಾಶ ಆಧರಿತ ಪಥದರ್ಶನ ವ್ಯವಸ್ಥೆಗೆ ಮಹತ್ವದ್ದಾಗಿತ್ತು. ಇದು ಯಶಸ್ವಿಯಾಗಿದ್ದಲ್ಲಿ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಸಾಧ್ಯವಿತ್ತು.

"ಆದರೆ ಥ್ರಸ್ಟರ್ ಗಳನ್ನು ಸಿಡಿಸಲು ಅಗತ್ಯವಾದ ಆಕ್ಸಿಡೈಸರ್ ಗಳಿಗೆ ಅವಕಾಶ ಮಾಡಿಕೊಡುವ ವಾಲ್ವ್ ಗಳು ತೆರೆದುಕೊಳ್ಳದೇ ಉಪಗ್ರಹವನ್ನು ನಿಗದಿತ ಸ್ಥಳದಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಕಕ್ಷೆಗೆ ಏರಿಸುವ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ" ಎಂದು ಜಿಎಸ್ಎಲ್ ವಿ -ಎಫ್15 ಮಿಷನ್ ಬಗೆಗಿನ ವೆಬ್ ಸೈಟ್ ಸ್ಪಷ್ಟಪಡಿಸಿದೆ.

"ಉಪಗ್ರಹ ವ್ಯವಸ್ಥೆ ಆರೋಗ್ಯಕರವಾಗಿದ್ದು, ಪ್ರಸ್ತುತ ಇದು ಧೀರ್ಘವೃತ್ತಾಕಾರದ ಕಕ್ಷೆಯಲ್ಲಿದೆ. ಈ ಕಕ್ಷೆಯಿಂದ ಪಥದರ್ಶನ ವ್ಯವಸ್ಥೆಗಾಗಿ ಉಪಗ್ರಹವನ್ನು ಬಳಸುವ ಪರ್ಯಾಯ ಮಿಷನ್ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ" ಎಂದು ಇಸ್ರೋ ಹೇಳಿದೆ.

ಜಿಎಸ್ಎಲ್ ವಿ ರಾಕೆಟ್ ಈ ಉಪಗ್ರಹವನ್ನು ಜಿಟಿಓಗೆ ಸೇರಿಸಿದ ಬಳಿಕ ಸೌರ ಪ್ಯಾನಲ್ಗಳನ್ನು ಯಶಸ್ವಿಯಾಗಿ ನಿಯೋಜಿಸಲಾಗಿದ್ದು, ಅಲ್ಪಪ್ರಮಾಣದ ವಿದ್ಯುತ್ ಉತ್ಪಾದನೆ ಆಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News