×
Ad

ಜಮ್ಮು ಕಾಶ್ಮೀರ | ಸರಣಿ ಸಾವುಗಳಿಗೆ ಆರ್ಗನೋಫಾಸ್ಫರಸ್ ವಿಷ ಕಾರಣ: ತಜ್ಞರು

Update: 2025-01-27 22:32 IST

PC : PTI 

ಶ್ರೀನಗರ: ಜಮ್ಮುಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ 17 ಜೀವಗಳನ್ನು ಬಲಿ ಪಡೆದಿರುವ ‘ನಿಗೂಢ ಕಾಯಿಲೆ’ಯ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ತಜ್ಞರು ಆರ್ಗನೋಫಾಸ್ಫರಸ್ ವಿಷವು ಈ ರೋಗಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಆರ್ಗನೋಫಾಸ್ಫರಸ್ ವಿಷವನ್ನು ಎದುರಿಸಲು ವಿಷಹಾರಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು,ಇದು ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದೆ.

‘ನಾವು ಎಟ್ರೋಪೈನ್ ಪ್ರತಿವಿಷವನ್ನು ಬಳಸಿದ್ದೇವೆ ಮತ್ತು ಅದು ಉತ್ತಮ ಫಲಿತಾಂಶವನ್ನು ನೀಡಿದೆ. ವಿಷದ ನಿಖರವಾದ ಸ್ವರೂಪವನ್ನು ನಿರ್ಧರಿಸಿದ ಬಳಿಕ ನಾವು ರೋಗಿಗಳಿಗೆ ಎಟ್ರೋಪೈನ್ ನೀಡಿದ್ದೇವೆ ’ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ರಾಜೌರಿ ಜಿಲ್ಲೆಯ ಬಧಾಲ್ ಗ್ರಾಮದಲ್ಲಿಯ ಸರಣಿ ಸಾವುಗಳ ಹಿಂದೆ ಸಾಂಕ್ರಾಮಿಕ ಕಾಯಿಲೆ ಅಥವಾ ಬ್ಯಾಕ್ಟೀರಿಯಾ/ವೈರಸ್ ಪಿಡುಗು ಕಾರಣ ಎನ್ನುವುದನ್ನು ತಳ್ಳಿಹಾಕಿರುವ ತಜ್ಞರು ಇದು ನ್ಯೂರೊಟಾಕ್ಸಿನ್ಗಳ ಪ್ರಕರಣ ಎಂದು ಪ್ರತಿಪಾದಿಸಿದ್ದಾರೆ. ವಿಷದ ನಿಖರವಾದ ಸ್ವರೂಪವನ್ನು ನಿರ್ಧರಿಸುವುದು ಸವಾಲಾಗಿ ಪರಿಣಮಿಸಿದ್ದು,ಇದು ಕಾಯಿಲೆಯ ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ರವಿವಾರ ಭಾರತೀಯ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರವು ಕೊನೆಗೂ ಈ ಸಾವುಗಳಿಗೆ ಆರ್ಗನೋಫಾಸ್ಫರಸ್ ವಿಷ ಕಾರಣವಾಗಿದೆ ಎಂದು ಜಮ್ಮುಕಾಶ್ಮೀರದ ಆರೋಗ್ಯ ಇಲಾಖೆಗೆ ತಿಳಿಸಿದೆ.

ಆಹಾರ ಅಥವಾ ನೀರಿನಲ್ಲಿ ಆರ್ಗನೋಫಾಸ್ಫರಸ್ ವಿಷದ ಬಳಕೆಯು ಆಕಸ್ಮಿಕವಾಗಿತ್ತೇ ಅಥವಾ ಕೊಲೆ ಉದ್ದೇಶದ್ದಾಗಿತ್ತೇ ಎನ್ನುವುದು ಈಗ ತನಿಖೆಯ ವಿಷಯವಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಸಾವುಗಳ ಕುರಿತು ತನಿಖೆ ನಡೆಸಲು ಜಮ್ಮುಕಾಶ್ಮೀರ ಪೋಲಿಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News