ಜಮ್ಮುಕಾಶ್ಮೀರ: 25 ಪುಸ್ತಕಗಳಿಗೆ ನಿಷೇಧ ಹೇರಿದ ಲೆಫ್ಟಿನೆಂಟ್ ಗವರ್ನರ್ ಕ್ರಮಕ್ಕೆ ನ್ಯಾಷನಲ್ ಕಾನ್ಫರೆನ್ಸ್ ಆಕ್ರೋಶ
ಪುಸ್ತಕದಂಗಡಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು PC: x.com/ImranNaik
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ (ಎಲ್‌ಜಿ) ಮನೋಜ್ ಸಿನ್ಹಾ ನೇತೃತ್ವದ ಗೃಹ ಇಲಾಖೆ 25 ಪುಸ್ತಕಗಳನ್ನು ನಿಷೇಧಿಸಿದ ಕ್ರಮವನ್ನು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಕ್ರಮವನ್ನು ದುರದೃಷ್ಟಕರ ಹಾಗೂ ತಪ್ಪಾದ ನಿರ್ಧಾರ ಎಂದು ಖಂಡಿಸಿದೆ. ನಿಷೇಧಿತ ಪಟ್ಟಿ ಬುಕರ್ ಪ್ರಶಸ್ತಿ ವಿಜೇತ ಅರುಂಧತಿ ರಾಯ್ ಹಾಗೂ ಸಂವಿಧಾನ ತಜ್ಞ ಎ.ಜಿ. ನೂರಾನಿ ಅವರ ಕೃತಿಗಳು ಸೇರಿವೆ.
ಈ ನಿಷೇಧವನ್ನು ರದ್ದುಗೊಳಿಸುವ ಮಾರ್ಗಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ತಿಳಿಸಿದೆ. ಎಲ್‌ಜಿ ಅವರ ನಿಯಂತ್ರಣದಲ್ಲಿರುವ ಗೃಹ ಇಲಾಖೆಯೇ ಈ ಕ್ರಮಕ್ಕೆ ಹೊಣೆ ಎಂದು ಪಕ್ಷವು ಸ್ಪಷ್ಟಪಡಿಸಿದೆ.
ಜಾಗತಿಕ ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಡಿಯಾವು ಈ ನಿಷೇಧವನ್ನು ಪ್ರಶ್ನಿಸಿದೆ. ಗೃಹ ಇಲಾಖೆಯ ಪ್ರಕಾರ, ಪ್ರತ್ಯೇಕತಾವಾದ ಸಿದ್ಧಾಂತಕ್ಕೆ ಬೆಂಬಲ, ಭಯೋತ್ಪಾದನೆಯ ವೈಭವೀಕರಣ ಅಥವಾ ವಿಕೃತ ಐತಿಹಾಸಿಕ ನಿರೂಪಣೆಗಳನ್ನು ಹೊಂದಿರುವ ಪ್ರಕಟಣೆಗಳ ವಿರುದ್ಧದ ಕ್ರಮ ಕೈಗೊಳ್ಳುತ್ತಿರುವ ಭಾಗವಾಗಿ ಪುಸ್ತಕಗಳ ಮೇಲೆ ನಿಷೇಧ ಜಾರಿಗೊಳಿಸಲಾಗಿದೆ ಎಂದು ಗೃಹ ಇಲಾಖೆಯು ಸ್ಪಷ್ಟಪಡಿಸಿದೆ.
ಕೃತಿಗಳನ್ನು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ನಿಷೇಧಿಸಿದ್ದಾರೆ, ಎಂದು ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ನನ್ನನ್ನು ಹೇಡಿ ಎಂದು ಕರೆಯುವ ಮೊದಲು ಸತ್ಯಗಳನ್ನು ತಿಳಿದುಕೊಳ್ಳಿ. ಗೃಹ ಇಲಾಖೆ ಎಲ್‌ಜಿಯವರ ನೇರ ನಿಯಂತ್ರಣದಲ್ಲಿಯೇ ಇದೆ. ನಾನು ಯಾವತ್ತೂ ಪುಸ್ತಕಗಳನ್ನು ನಿಷೇಧಿಸಿಲ್ಲ, ಮುಂದೆ ಕೂಡ ಮಾಡುವುದಿಲ್ಲ” ಎಂದು Xನಲ್ಲಿನ ಪೋಸ್ಟ್ ನಲ್ಲಿ ಅವರು ಬರೆದಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 98 ಅಡಿಯಲ್ಲಿ ಮಂಗಳವಾರ ಹೊರಡಿಸಿದ ಆದೇಶದ ನಂತರ, ಗುರುವಾರ ಪೊಲೀಸರು ದಾಲ್ ಸರೋವರದ ತೀರದಲ್ಲಿರುವ ಚಿನಾರ್ ಪುಸ್ತಕೋತ್ಸವ ಸೇರಿದಂತೆ ಅಂಗಡಿಗಳು ಮತ್ತು ಸಾಹಿತ್ಯ ವೇದಿಕೆಗಳಿಂದ “ವಿಧ್ವಂಸಕ” ಎಂದು ಗುರುತಿಸಿದ ಪುಸ್ತಕಗಳನ್ನು ವಶಪಡಿಸಿಕೊಂಡರು.
ಈ ಕುರಿತು ಪ್ರತಿಕ್ರಿಯಿಸಿರುವ ಎನ್‌ಸಿ ವಕ್ತಾರ ತನ್ವೀರ್ ಸಾದಿಕ್, “ವಿಭಿನ್ನ ಅಭಿಪ್ರಾಯಗಳಿಗೆ ನಾವು ಏಕೆ ಹೆದರುತ್ತೇವೆ?" ಎಂದು ಪ್ರಶ್ನಿಸಿದ್ದಾರೆ. ಪುಸ್ತಕಗಳ ನಿಷೇಧಗಳಿಂದ ಆ ಕುರಿತ ಕುತೂಹಲ ಹೆಚ್ಚಿಸುತ್ತದೆ ಎಂದು ಇತಿಹಾಸವೇ ತೋರಿಸಿದೆ. ಏಕೆ ನಿಷೇಧಿಸಲಾಗಿದೆ ಎಂಬುದನ್ನು ತಿಳಿಯಲು ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಓದುಗರ ಸಂಖ್ಯೆಯೂ ಹೆಚ್ಚಾಗುತ್ತದೆ. ಈ ರೀತಿಯ ಕ್ರಮಗಳು ಅಭಿಪ್ರಾಯಗಳ ದನಿಗಳನ್ನು ಅಡಗಿಸಲು ಎಂದಿಗೂ ಯಶಸ್ವಿಯಾಗಿಲ್ಲ” ಎಂದು ಅವರು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಆಮ್ನೆಸ್ಟಿ ಇಂಡಿಯಾ, ರಾಯ್ ಅವರ ಆಝಾದಿ ಸೇರಿದಂತೆ ನಿಷೇಧಿತ 25 ಪುಸ್ತಕಗಳು “ಭಯೋತ್ಪಾದನಾ ಕೈಪಿಡಿಗಳು” ಅಲ್ಲ, ಬದಲಾಗಿ ಗೌರವಾನ್ವಿತ ಪತ್ರಕರ್ತರು, ಇತಿಹಾಸಕಾರರು, ಸ್ತ್ರೀವಾದಿಗಳು ಮತ್ತು ಶಾಂತಿ ವಿದ್ವಾಂಸರ ವಿಮರ್ಶಾತ್ಮಕ ಧ್ವನಿಗಳಾಗಿವೆ ಎಂದು ತಿಳಿಸಿದೆ. “ಸರಿಯಾದ ಕಾನೂನು ಪ್ರಕ್ರಿಯೆ ಮತ್ತು ನ್ಯಾಯಾಂಗ ಮೇಲ್ವಿಚಾರಣೆಯಿಲ್ಲದೆ ಆದೇಶದ ಮೂಲಕ ಪುಸ್ತಕಗಳನ್ನು ಸೆನ್ಸಾರ್ ಮಾಡುವುದು ಭಿನ್ನಾಭಿಪ್ರಾಯಗಳ ದನಿಯನ್ನು ಮೌನಗೊಳಿಸಬಹುದು” ಎಂದು ಹೇಳಿದೆ.
ವಶಪಡಿಸಿಕೊಳ್ಳಲಾದ ಪುಸ್ತಕಗಳಲ್ಲಿ ಅನುರಾಧಾ ಭಾಸಿನ್ ಅವರ A Dismantled State: The Untold Story of Kashmir After Article 370, ನೂರಾನಿ ಅವರ The Kashmir Dispute, 1947–2012, ಹಾಗೂ ಸುಮಂತ್ರ ಬೋಸ್ ಅವರ Kashmir at the Crossroads ಸೇರಿವೆ.