ಪ್ರಸಿದ್ಧ ಖಗೋಳ ಭೌತಶಾಸ್ತ್ರಜ್ಞ ಜಯಂತ ವಿಷ್ಣು ನಾರ್ಳೀಕರ್ ನಿಧನ
ಜಯಂತ್ ವಿಷ್ಣು ನಾರ್ಲಿಕರ್ (Photo credit: Facebook/Jijo P. Ulahannan)
ಪುಣೆ: ಪ್ರಸಿದ್ಧ ಖಗೋಳ ಭೌತಶಾಸ್ತ್ರಜ್ಞ, ವಿಜ್ಞಾನ ಸಂವಹನಕಾರ ಮತ್ತು ಅಂತರ ವಿಶ್ವವಿದ್ಯಾಲಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕೇಂದ್ರದ (IUCAA) ಸ್ಥಾಪಕ ನಿರ್ದೇಶಕ ಜಯಂತ ವಿಷ್ಣು ನಾರ್ಳೀಕರ್ ಮಂಗಳವಾರ ಪುಣೆಯಲ್ಲಿ ನಿಧನರಾದರು. 87 ವರ್ಷ ಪ್ರಾಯದ ನಾರ್ಳೀಕರ್ ಅವರು ಇತ್ತೀಚೆಗಷ್ಟೇ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಡಾ. ನಾರ್ಳೀಕರ್ ವಿಶ್ವವಿಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ, ವಿಶೇಷವಾಗಿ ಬಿಗ್ ಬ್ಯಾಂಗ್ ಸಿದ್ಧಾಂತಕ್ಕೆ ಪರ್ಯಾಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ ಜಾಗತಿಕವಾಗಿ ಗೌರವಿಸಲ್ಪಟ್ಟರು. ಭಾರತದಲ್ಲಿ, ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ಸಂಶೋಧನೆಗಾಗಿ ವಿಶ್ವ ದರ್ಜೆಯ ಸಂಸ್ಥೆಗಳನ್ನು ರಚಿಸುವಲ್ಲಿ ಅವರು ಗಣನೀಯ ಪಾತ್ರವನ್ನು ವಹಿಸಿದ್ದಾರೆ.
ಮೃತರು ಪುತ್ರಿಯರಾದ ಗೀತಾ, ಗಿರಿಜಾ ಮತ್ತು ಲೀಲಾವತಿ ಅವರನ್ನು ಅಗಲಿದ್ದಾರೆ. ಅವರೆಲ್ಲರೂ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.