×
Ad

ಜಾರ್ಖಂಡ್ | ಗುಂಪಿನಿಂದ ದಾಳಿ : ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯ

Update: 2025-10-19 22:59 IST

ರಾಂಚಿ, ಅ. 19: ಟ್ರ್ಯಾಕ್ಟರ್ ತಡೆದು ಚಾಲಕನಿಗೆ ಥಳಿಸಿರುವುದಾಗಿ ಆರೋಪಿಸಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ವಿಚಾರಣೆ ನಡೆಸಲು ತೆರಳಿದ್ದ ಪೊಲೀಸ್ ತಂಡದ ಮೇಲೆ ಗುಂಪೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸರು ಗಾಯಗೊಂಡ ಘಟನೆ ಹಿರಣಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗೂಠಿಯಾ ಗ್ರಾಮದಲ್ಲಿ ಶನಿವಾರ ನಡೆದಿದೆ.

ಟ್ರ್ಯಾಕ್ಟರ್ ಮಾಲಕ ನೀಡಿದ ದೂರು ಸ್ವೀಕರಿಸಿದ ಬಳಿಕ ಎಎಸ್‌ಐ ಗೋವಿಂದ ಕುಮಾರ್ ಸಹಾ ತನ್ನ ತಂಡದೊಂದಿಗೆ ಸ್ಥಳಕ್ಕೆ ತಲುಪಿದ ಸಂದರ್ಭ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ಮು ರಾಯ್ (39), ಸಿಯೊ ರಾಯ್ (36) ಹಾಗೂ ಇತರ ಹಲವರು ತನ್ನ ಟ್ರ್ಯಾಕ್ಟರ್ ಅನ್ನು ತಡೆದಿದ್ದಾರೆ. ಚಾಲಕನಿಗೆ ಹಲ್ಲೆ ನಡೆಸಿದ್ದಾರೆ ಹಾಗೂ ಸುಲಿಗೆ ಹಣಕ್ಕೆ ಬೇಡಿಕೆ ಇರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಪೊಲೀಸರ ತಂಡ ಸ್ಥಳಕ್ಕೆ ತಲುಪುತ್ತಿದ್ದಂತೆ ಆರೋಪಿಗಳು, ಹಲವು ಮಹಿಳೆಯರು ಸೇರಿದಂತೆ ಅವರ ಸಹವರ್ತಿಗಳು ಪೊಲೀಸರ ಮೇಲೆ ದೊಣ್ಣೆ, ಕಲ್ಲು ಹಾಗೂ ಹರಿತವಾದ ಆಯುಧಗಳಿಂದ ದಾಳಿ ನಡೆಸಿದರು. ಎಎಸ್‌ಐ ಸಹಾ ಅವರನ್ನು ಮರಕ್ಕೆ ಕಟ್ಟಿ ಹಾಕಿದರು ಹಾಗೂ ಹೆಚ್ಚುವರಿ ಪೊಲೀಸರು ಆಗಮಿಸುವ ವರೆಗೆ ಅವರಿಗೆ ಬರ್ಬರವಾಗಿ ಥಳಿಸಿದರು.

ಸ್ಥಳಕ್ಕೆ ತಲುಪುತ್ತಿದ್ದಂತೆ ಎಎಸ್‌ಐ ದಿಲೀಪ್ ಕುಮಾರ್ ನೇತೃತ್ವದ ಎರಡನೇ ತಂಡದ ಮೇಲೆ ಕೂಡ ಗುಂಪು ದಾಳಿ ನಡೆಸಿತು. ಇದರಿಂದ ದಿಲೀಪ್ ಕುಮಾರ್ ಅವರು ಕೂಡ ಗಾಯಗೊಂಡರು. ಈ ದಾಳಿಯ ಸಂದರ್ಭ ಕಾನ್ಸಟೆಬಲ್ ನಯಿಮುಲ್ ಅನ್ಸಾರಿ ಅವರ ಸಮವಸ್ತ್ರ ಹರಿದು ಹೋಯಿತು. ಪೊಲೀಸರು ಅನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಇಬ್ಬರು ಪ್ರಮುಖ ಆರೋಪಿಗಳಾದ ಕರ್ಮು ರಾಯ್ ಹಾಗೂ ಸಿಯೊ ರಾಯ್ ಅವರನ್ನು ಬಂಧಿಸಿದರು.

ಹಲ್ಲೆಯಲ್ಲಿ ಭಾಗಿಯಾಗಿದ್ದ ಇತರ ಸುಮಾರು 10ರಿಂದ 15 ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಅವರನ್ನು ಬಂಧಿಸಲು ದಾಳಿ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಗೊಂಡ ಎಸ್‌ಐ ಗೋವಿಂದ ಸಹಾ ಹಾಗೂ ದಿಲೀಪ್ ಕುಮಾರ್ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳ ಮೇಲಿನ ದಾಳಿ ‘‘ಗಂಭೀರ ಅಪರಾಧ’’. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್‌ಡಿಪಿಒ ದಯಾನಂದ ಅಝಾದ್ ಹೇಳಿದ್ದಾರೆ.

ಹಿರಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾನೂನು ಕೈಗೆತ್ತಿಕೊಳ್ಳದಂತೆ ಹಾಗೂ ತನಿಖೆಗೆ ಸಹಕರಿಸುವಂತೆ ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News