×
Ad

ಉತ್ತರಕಾಶಿ | ಪತ್ರಕರ್ತನ ಮೃತದೇಹ ಪತ್ತೆ ಪ್ರಕರಣ : ಎದೆ, ಹೊಟ್ಟೆಗೆ ಗಾಯವಾಗಿರುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗ

Update: 2025-10-01 15:51 IST

Photo : X/@theprayagtiwari

ಉತ್ತರಕಾಶಿ : ಉತ್ತರಕಾಶಿ ಜಿಲ್ಲೆಯ ಅಣೆಕಟ್ಟಿನಲ್ಲಿ ಉತ್ತರಾಖಂಡದ ಪತ್ರಕರ್ತ ರಾಜೀವ್ ಪ್ರತಾಪ್ ಮೃತದೇಹ ಪತ್ತೆಯಾಗಿತ್ತು. ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಎದೆ ಮತ್ತು ಹೊಟ್ಟೆಗೆ ಆಂತರಿಕ ಗಾಯಗಳಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಕಾಶಿಯ ಪೊಲೀಸ್ ವರಿಷ್ಠಾಧಿಕಾರಿ ಸರಿತಾ ದೋವಲ್ ಈ ಕುರಿತು ಪ್ರತಿಕ್ರಿಯಿಸಿ,  ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಪತ್ರಕರ್ತನ ದೇಹದ ಮೇಲೆ ಹಲ್ಲೆ ನಡೆದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಎದೆ ಮತ್ತು ಹೊಟ್ಟೆಗೆ ಆದ ಆಂತರಿಕ ಗಾಯಗಳಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಮರಣೋತ್ತರ ವರದಿಯಲ್ಲಿ ಬಹಿರಂಗಗೊಂಡಿದೆ. ಅಪಘಾತದ ಸಮಯದಲ್ಲಿ ಇಂತಹ ಗಾಯಗಳು ಸಂಭವಿಸುತ್ತವೆ ಎಂದು ಹೇಳಿದರು.  

ರಾಜೀವ್ ಪ್ರತಾಪ್ ಸೆಪ್ಟೆಂಬರ್ 18ರಂದು ಉತ್ತರಕಾಶಿ ಬಸ್ ನಿಲ್ದಾಣದಲ್ಲಿರುವ ಚೌಹಾಣ್ ಹೋಟೆಲ್‌ನಲ್ಲಿ ತನ್ನ ಸ್ನೇಹಿತನೊಂದಿಗೆ ಊಟ ಮಾಡಿದ ನಂತರ ಸ್ನೇಹಿತನ ಕಾರಿನಲ್ಲಿ ಉತ್ತರಕಾಶಿಯಿಂದ ಗಂಗೋರಿಗೆ ತೆರಳಿದ್ದನು. ಆದರೆ ಆ ಬಳಿಕ ಆತ ವಾಪಾಸ್ಸಾಗಿರಲಿಲ್ಲ. ಅವನ ಸ್ನೇಹಿತ ಸೆಪ್ಟೆಂಬರ್ 19ರಂದು ಪೊಲೀಸರು ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ. 10 ದಿನಗಳ ನಂತರ ರವಿವಾರ ಅವರ ಮೃತದೇಹ ಪತ್ತೆಯಾಗಿತ್ತು.

"ಕೆಲವು ಸುದ್ದಿ ವರದಿ ಮಾಡಿದ ನಂತರ ಅವರಿಗೆ ಬೆದರಿಕೆ ಕರೆಗಳು ಬರುತ್ತಿತ್ತು" ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಕೆಲವು ಪತ್ರಕರ್ತರ ಸಂಘಟನೆಗಳು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿವೆ.

ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸಿದ್ದರು. ಇದೀಗ ಪ್ರಕರಣದ ಕುರಿತು ತನಿಖೆಗೆ ಉತ್ತರಾಖಂಡ ಪೊಲೀಸರು ಎಸ್ಐಟಿ ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News