ಕರ್ನಾಟಕ ರಾಜ್ಯಪಾಲರ ಮೊಮ್ಮಗನ ಮೇಲೆ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಆರೋಪ
PC: x.com/ndtv
ಭೋಪಾಲ್: ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಮೊಮ್ಮಗ ದೇವೇಂದ್ರ ಗೆಹ್ಲೋಟ್ ಅವರ ಪತ್ನಿ ದಿವ್ಯಾ ಗೆಹ್ಲೋಟ್, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ, ದೈಹಿಕ–ಮಾನಸಿಕ ಹಿಂಸೆ, ಕೊಲೆ ಯತ್ನ ಹಾಗೂ ನಾಲ್ಕು ವರ್ಷದ ಮಗಳ ಅಪಹರಣದ ಗಂಭೀರ ಆರೋಪಗಳನ್ನು ಹೊರಿಸಿರುವ ಘಟನೆ ಬೆಳಕಿಗೆ ಬಂದಿದೆ.
ದಿವ್ಯಾ ಅವರು ರತ್ಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಅವರಿಗೆ ಸಲ್ಲಿಸಿರುವ ದೂರಿನಲ್ಲಿ, ತಮ್ಮ ಮಗಳನ್ನು ಉಜ್ಜಯಿನಿ ಜಿಲ್ಲೆಯ ನಾಗ್ಡಾದಲ್ಲಿ ಅತ್ತೆ-ಮಾವ ಬಲವಂತವಾಗಿ ಇರಿಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ. “ಮಗುವನ್ನು ತಕ ಸುರಕ್ಷಿತವಾಗಿ ಮರಳಿ ಪಡೆಯಲು ಕ್ರಮಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ವರ್ಷಗಳಿಂದ ಮುಂದುವರಿದ ವರದಕ್ಷಿಣೆ ಒತ್ತಡ
ದಿವ್ಯಾ ದೂರಿನಲ್ಲಿ ಪತಿ ದೇವೇಂದ್ರ ಗೆಹ್ಲೋಟ್ (33), ಅಲೋಟ್‌ನ ಮಾಜಿ ಶಾಸಕ ಜಿತೇಂದ್ರ ಗೆಹ್ಲೋಟ್ (55), ಸೋದರ ಮಾವ ವಿಶಾಲ್ ಗೆಹ್ಲೋಟ್ (25), ಅಜ್ಜಿ ಅನಿತಾ ಗೆಹ್ಲೋಟ್ (60) ಇವರು 50 ಲಕ್ಷ ರೂ. ವರದಕ್ಷಿಣೆಗೆ ಒತ್ತಾಯಿಸಿ ಹಲವು ವರ್ಷಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮದುವೆಗೆ ಮುನ್ನ ಪತಿಯ ಮದ್ಯಪಾನ, ಮಾದಕ ವ್ಯಸನ ಹಾಗೂ ಅಕ್ರಮ ಸಂಬಂಧಗಳ ವಿಚಾರವನ್ನು ಮುಚ್ಚಿಡಲಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
2018ರ ಏಪ್ರಿಲ್ 29ರಂದು ತಾಲ್ (ಅಲೋಟ್) ನಲ್ಲಿ ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ ಇವರ ವಿವಾಹ ನಡೆದಿತ್ತು. ಆಗಿನ ಕೇಂದ್ರ ಸಚಿವೆ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮದುವೆಯ ನಂತರ ಪತಿಯ ವ್ಯಸನ, ಅಸಭ್ಯ ವರ್ತನೆ ಮತ್ತು ದೈಹಿಕ ಹಿಂಸೆ ನಿತ್ಯವೂ ನಡೆಯುತ್ತಿತ್ತು ಎಂದು ದಿವ್ಯಾ ಹೇಳಿಕೊಂಡಿದ್ದಾರೆ. “ಹಣ ತರದಿದ್ದರೆ ನಿಂದನೆ, ಹೊಡೆತ… ಎಲ್ಲವು ಸಹಜವಾಗಿಬಿಟ್ಟಿತ್ತು” ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ದಿವ್ಯಾ ಅವರು ಗರ್ಭಿಣಿಯಾಗಿದ್ದಾಗ 2021ರಲ್ಲಿ ಹಿಂಸೆ ಮತ್ತಷ್ಟು ತೀವ್ರಗೊಂಡಿತ್ತೆಂದು ಅವರು ಹೇಳಿದ್ದಾರೆ. ಆಹಾರವನ್ನೂ ನೀಡದೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿತ್ತು. ಮಗು ಜನಿಸಿದ ಬಳಿಕವೂ ಪರಿಸ್ಥಿತಿ ಹಾಗೆಯೇ ಮುಂದುವರಿದಿತ್ತು ಎಂದು ಆರೋಪಿಸಲಾಗಿದೆ.
ಈ ವರ್ಷ ಜನವರಿ 26ರ ರಾತ್ರಿ ಪತಿ ಪಾನಮತ್ತರಾಗಿ, ಹಣ ತರದಿದ್ದರೆ ಕೊಲ್ಲುವುದಾಗಿ ಬೆದರಿಸಿ, ಮೇಲ್ಛಾವಣಿಯಿಂದ ತಳ್ಳಿದ್ದಾರೆ ಎಂದು ದಿವ್ಯಾ ಆರೋಪಿಸಿದ್ದಾರೆ. ಕೆಳಗಿನ ಗ್ಯಾಲರಿಗೆ ಬಿದ್ದು ಅವರಿಗೆ ಬೆನ್ನು, ಭುಜ ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದರೂ, ರಾತ್ರಿಯಿಡೀ ಆಸ್ಪತ್ರೆಗೆ ಕರೆದೊಯ್ಯಲಿಲ್ಲ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಮರುದಿನ ನಾಗ್ಡಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವುದರಿಂದ ಇಂದೋರ್‌ನ ಬಾಂಬೆ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು. ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡದೇ, ತಂದೆಯೇ ಚಿಕಿತ್ಸೆ ವೆಚ್ಚ ಭರಿಸಬೇಕೆಂದು ಒತ್ತಡ ಹೇರಲಾಗಿದೆ ಎಂದು ಅವರು ಹೇಳಿದ್ದಾರೆ.
ದಿವ್ಯಾಳಿಗೆ ತನ್ನ ನಾಲ್ಕು ವರ್ಷದ ಮಗಳನ್ನು ಅತ್ತೆ-ಮಾವ ಬಲವಂತವಾಗಿ ತಡೆದು ಇಟ್ಟಿದ್ದು, ಭೇಟಿಗೂ ಅವಕಾಶ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ. ನವೆಂಬರ್ ನಲ್ಲಿ ಮಗಳನ್ನು ನೋಡಲು ಶಾಲೆಗೆ ಭೇಟಿ ನೀಡಿದಾಗ, “ನಿನ್ನ ಪೋಷಕರಿಂದ ಹಣ ತರದಿದ್ದರೆ ಮಗಳನ್ನು ನೋಡಲು ಸಾಧ್ಯವಿಲ್ಲ” ಎಂದು ಪತಿ ತಡೆದಿದ್ದಾನೆಂದು ದಿವ್ಯಾ ದೂರು ನೀಡಿದ್ದಾರೆ. ಈ ಸಂದರ್ಭ “ತಾಯಿ ಮಾತ್ರ ಮಗುವನ್ನು ಸರಿಯಾಗಿ ನೋಡಿಕೊಳ್ಳಬಲ್ಲಳು… ನನಗೆ ನನ್ನ ಮಗಳು ಬೇಕು” ಎಂದು ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ರತ್ಲಂ ಪೊಲೀಸರು ಈ ಬಗ್ಗೆ ದೂರು ಸ್ವೀಕರಿಸಿದ್ದು, ಘಟನೆಯು ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿರುವ ಹಿನ್ನೆಲೆ, ಸಂಬಂಧಿತ ಅಧಿಕಾರಿಗಳಿಗೆ ದೂರನ್ನು ಕಳುಹಿಸಲಾಗಿದೆ.
ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಜಿತೇಂದ್ರ ಗೆಹ್ಲೋಟ್, “ಯಾರು ಬೇಕಾದರೂ ಆರೋಪ ಮಾಡಬಹುದು. ಎಲ್ಲ ಸಂಗತಿಗಳನ್ನು ನಾನು ಮಾಧ್ಯಮಗಳ ಮುಂದೆ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.