×
Ad

ನಿವೃತ್ತಿಗೆ ಮೂರು ದಿನ ಬಾಕಿ ಇರುವಾಗ ಕೇರಳದ ಎಡಿಜಿಪಿ ಮೃತ್ಯು

Update: 2025-08-27 21:32 IST

PC | X.com

ತಿರುವನಂತಪುರಂ: ಆಗಸ್ಟ್ 30ರಂದು ಕೇರಳ ರಾಜ್ಯ ಸರಕಾರ ತಮಗೆ ಆನ್ ಲೈನ್ ನಲ್ಲಿ ಅಧಿಕೃತ ವಿದಾಯ ಕಾರ್ಯಕ್ರಮ ಏರ್ಪಡಿಸುವುದಕ್ಕೂ ಮುನ್ನವೇ, ನಿವೃತ್ತಿಗೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಇರುವಾಗ, 1997ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮಹಿಪಾಲ್ ಯಾದವ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮಹಿಪಾಲ್ ಯಾದವ್ ರಾಜಸ್ಥಾನದ ಜೈಪುರದಲ್ಲಿ ನಿಧನರಾಗಿದ್ದು, ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ವಿಷಮಿಸಿದ್ದರಿಂದ, ಅವರ ಕುಟುಂಬದ ಸದಸ್ಯರು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ದಿದ್ದರು. ತಮ್ಮ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಭಾಜನರಾಗಿದ್ದ ಮಹಿಪಾಲ್ ಯಾದವ್, ಕೇರಳ ಅಬಕಾರಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಅವರು ವೈದ್ಯಕೀಯ ರಜೆಯ ಮೇಲೆ ಕರ್ತವ್ಯದಿಂದ ತೆರಳುವುದಕ್ಕೂ ಮುನ್ನ, ಅವರನ್ನು ಇತ್ತೀಚೆಗಷ್ಟೇ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿತ್ತು.

ರಾಜಸ್ಥಾನದ ಅಲ್ವಾರ್ ನ ನಿವಾಸಿಯಾದ ಮಹಿಪಾಲ್ ಯಾದವ್, ನಿಯೋಜನೆಯ ಮೇಲೆ ಗಡಿ ಭದ್ರತಾ ಪಡೆ ಹಾಗೂ ಕೇಂದ್ರೀಯ ತನಿಖಾ ತಂಡ(CBI)ಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಅವರು ಸಿಬಿಐನಲ್ಲಿದ್ದಾಗ, ಅತಿ ಗಣ್ಯ ವ್ಯಕ್ತಿಗಳ ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣ ಹಾಗೂ ಮುಲಾಯಂ ಸಿಂಗ್ ಯಾದವ್ ಅವರ ಆಸ್ತಿ ತನಿಖೆ ಪ್ರಕರಣಗಳ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

2018ರಲ್ಲಿ ಅವರು ಜಲಂಧರ್ ನ ಬಿಎಸ್ಎಫ್ ಪಂಜಾಬ್ ಫ್ರಾಂಟಿಯರ್ ನ ಪೊಲೀಸ್ ಮುಖ್ಯಿಸ್ಥರಾಗಿ ಕಾರ್ಯನಿರ್ವಹಿಸಿದ್ದರು. 2023ರಲ್ಲಿ ಮತ್ತೆ ಮಾತೃ ಕೇಡರ್ ಗೆ ಮರಳಿದ್ದ ಮಹಿಪಾಲ್ ಯಾದವ್, ಕೇರಳ ಅಬಕಾರಿ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಕೇರಳದಲ್ಲಿ ಅವರು ಕೊಚ್ಚಿ ನಗರ ಪೊಲೀಸ್ ಆಯುಕ್ತ, ಆಂತರಿಕ ಭದ್ರತೆಗೆ ಪೊಲೀಸ್ ಮಹಾ ನಿರೀಕ್ಷಕ ಹಾಗೂ ತಿರುವನಂತಪುರಂ ವಲಯದ ಪೊಲೀಸ್ ಮಹಾನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News