×
Ad

ಕೇರಳ: ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಚಾಂಡಿ ಉಮ್ಮನ್ ಗೆ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು

Update: 2023-09-08 14:47 IST

Chandy Oommen, Photo: PTI

ಕೊಟ್ಟಾಯಂ: ಕೇರಳದ ಪುತ್ತುಪ್ಪಲ್ಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶುಕ್ರವಾರ ಉಳಿಸಿಕೊಂಡಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರು ದಾಖಲೆಯ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚಾಂಡಿ ಅವರು ಸಿಪಿಎಂನ ಜೈಕ್ ಸಿ. ಥಾಮಸ್ ಅವರನ್ನು 37,719 ಮತಗಳಿಂದ ಸೋಲಿಸಿದರು. ಕ್ಷೇತ್ರದಲ್ಲಿ ತಮ್ಮ ತಂದೆ ಗಳಿಸಿದ್ದ ದಾಖಲೆ ಅಂತರದ ಗೆಲುವನ್ನು (33,255 ಮತ) ಮೀರಿ ನಿಂತರು.

ಚುನಾವಣೆಯ ಫಲಿತಾಂಶವು ಎಲ್ಡಿಎಫ್ ದುರಾಡಳಿತದ ವಿರುದ್ಧದ ಗೆಲುವು ಹಾಗೂ ಕಾಂಗ್ರೆಸ್ ಗೆ ಶೇಕಡಾ 100 ರಷ್ಟು ರಾಜಕೀಯ ಗೆಲುವು ಇದಾಗಿದೆ ಎಂದು ಪಕ್ಷವು ಉಮ್ಮನ್ ಅವರ ಗೆಲುವಿಗೆ ಪ್ರತಿಕ್ರಿಯಿಸಿದೆ.

ಕಾಂಗ್ರೆಸ್ ನ ದಿವಂಗತ ಉಮ್ಮನ್ ಚಾಂಡಿ ಅವರ ಪುತ್ರ ಉಮ್ಮನ್ ಅವರು ಆರಂಭಿಕ ಸುತ್ತಿನಿಂದ ಸ್ಪಷ್ಟ ಮುನ್ನಡೆ ಗಳಿಸಿದರೆ, ಅವರ ಸಮೀಪದ ಪ್ರತಿಸ್ಪರ್ಧಿ ಹಾಗೂ ಆಡಳಿತಾರೂಢ ಎಲ್ ಡಿಎಫ್ ಅಭ್ಯರ್ಥಿ ಜೈಕ್ ಸಿ. ಥಾಮಸ್ ಅವರು ಯಾವುದೇ ಸುತ್ತಿನಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ.

ಸಿಪಿಎಂ ನೇತೃತ್ವದ ಎಲ್ಡಿಎಫ್ ತನ್ನ ಭದ್ರಕೋಟೆ ಪ್ರದೇಶಗಳಲ್ಲೂ ನೆಲೆ ಕಳೆದುಕೊಂಡಿದ್ದು, ಮತ ಎಣಿಕೆ ಮುಗಿದಾಗ ಬಿಜೆಪಿ ಅಭ್ಯರ್ಥಿ ಲಿಜಿನ್ ಲಾಲ್ ಸ್ಪರ್ಧೆಯಲ್ಲೇ ಇರಲಿಲ್ಲ.

ಪ್ರಸ್ತುತ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಸೆಲ್ ವೊಂದರ ಅಧ್ಯಕ್ಷರಾಗಿರುವ ಚಾಂಡಿ ಉಮ್ಮನ್ (37ವರ್ಷ) ಅವರು ತಮ್ಮ ತಂದೆ ಐದು ದಶಕಗಳಿಂದ ರಾಜ್ಯ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದ ಪುತ್ತುಪ್ಪಲ್ಲಿ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದರು.

2024 ರ ಲೋಕಸಭಾ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಬಂದಿರುವ ಉಪಚುನಾವಣೆ ಫಲಿತಾಂಶವು ಪ್ರತಿಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಬಿಜೆಪಿಯಿಂದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳನ್ನು ಎದುರಿಸುತ್ತಿರುವ ಆಡಳಿತಾರೂಢ ಸಿಪಿಎಂಗೆ ಭಾರಿ ಹಿನ್ನಡೆಯಾಗಿದೆ. .

ಉಮ್ಮನ್ ಚಾಂಡಿ ನಿಧನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5 ರಂದು ಉಪ ಚುನಾವಣೆ ನಡೆಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News